Friday, February 22, 2013

ಹೆಚ್ಚುತ್ತಿರುವ ಸ್ತನ ಕಾನ್ಸರ್ : ಹಸಿರು ತರಕಾರಿಗಳು ಜೀವದಾನ ನೀಡಬಲ್ಲವೇ ?



ಹೆಚ್ಚುತ್ತಿರುವ ಸ್ತನ ಕಾನ್ಸರ್ : ಹಸಿರು ತರಕಾರಿಗಳು ಜೀವದಾನ ನೀಡಬಲ್ಲವೇ ?
ಹೂಕೋಸು,ಎಲೆಕೋಸು, ನವಿಲು ಕೋಸು, ಬ್ರೋಕೋಲಿ ಮುಂತಾದ ಕೋಸು ಜಾತಿಯ ಹಸಿರು ತರಕಾರಿಗಳ ಸೇವನೆ ಸ್ತನ ಕಾನ್ಸರ್ ನಿಂದಾಗುವ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ಇಳಿಮುಖಗೊಳಿಸಬಹುದು ಎಂದು ಚೈನಾ ವಿಜ್ನಾಗಿಗಳು ಕಂಡುಹಿಡಿದಿದ್ದಾರೆ. ಇಂಗ್ರಾಮ್ ಕಾನ್ಸರ್ ಸೆಂಟರ್ ಅಂಡ್ ಶಾಂಘಾಯ್ ಸೆಂಟರ್ ಫಾರ್ ಡೀಸೀಸ್ ಕಂಟ್ರೋಲ್ ಅಂಡ್ ಪ್ರೇವೆಂಸನ್ ಸಂಸ್ಥೆಯ ವಿಜ್ನಾನಿಗಳು ನಡೆಸಿದ ಸಂಶೋಧನೆಯಲ್ಲಿ ಅಂಶ ಬೆಳಕಿಗೆ ಬಂದಿದೆ. ವಿಜ್ನಾನಿ ಸಾರಾ ಜೆ ನೆಚ್ಚುತ ಅವರು ಇತ್ತೀಚೆಗೆ ಶಿಕಾಗೋ ದಲ್ಲಿ ನಡೆದ ಅಮೆರಿಕನ್ ಸೆಂಟರ್ ಫಾರ್ ಕಾನ್ಸರ್ ರಿಸರ್ಚ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ತಮ್ಮ ಸಂಶೋಧನೆಯ ಫಲಿತಾಂಶವನ್ನು ಮಂಡಿಸಿದರು. 4886 ಸ್ತನ ಕಾನ್ಸರ್ ರೋಗಿಗಳನ್ನು ಒಳಗೊಂಡ ಸಂಶೋಧನೆಯಲ್ಲಿ ಪ್ರಾರಂಭಿಕ ಹಂತದ ಕಾನ್ಸರ್ ನಿಂದ ಹಿಡಿದು 4 ನೇ ಹಂತದ ಕಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರಿಗೆ ಎಲೆಕೋಸು, ಹೂಕೋಸು, ಬ್ರೋಕೋಲಿ ಮುಂತಾದ ಹೂಕೋಸು (Cruciferous) ಜಾತಿಯ ಹಸಿರು ತರಕಾರಿಗಳನ್ನು 36 ತಿಂಗಳುಗಳ ಕಾಲ ಸತತವಾಗಿ ನೀಡಲಾಯಿತು. ಕಾನ್ಸರ್ ರೋಗಿಗಳ ಜೀವನಶೈಲಿ, ಅವರು ವಾಸಿಸುವ ಸುತ್ತಲಿನ ಪರಿಸರ, ಯಾವ ಹಂತದ ಕಾನ್ಸರ್ ನಿಂದ ರೋಗಿ ಬಳಲುತ್ತಾರೆಂಬ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಬೇರೆ ಬೇರೆ ರೋಗಿಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಹಸಿರು ತರಕಾರಿಗಳನ್ನು ನೀಡಲಾಯ್ತು. ಕಾನ್ಸರ್ ರೋಗವಿರುವುದು ಪತ್ತೆಯಾಗುತ್ತಿದ್ದಂತೆಯೇ ಮುಂದಿನ 36 ತಿಂಗಳುಗಳ ಕಾಲ ಹೆಚ್ಚು ಹೆಚ್ಚು ತರಕಾರಿಗಳನ್ನು ಸೇವಿಸಿದವರಲ್ಲಿ ರೋಗದಿಂದ ಮರಣಿಸುವ ಸಾಧ್ಯತೆ ಕಡಿಮೆ ಆಯಿತು ಹಾಗೂ ರೋಗ ಮರುಕಳಿಸುವ ಸಾಧ್ಯತೆಯೂ ಕಡಿಮೆಯಾಯ್ತು. ಪ್ರತಿದಿನ ಕಡಿಮೆ ಪ್ರಮಾಣದ ತರಕಾರಿ ಸೇವಿಸಿದ ಮಹಿಳೆಯರಿಗೆ ಹೊಲಿಸಿದಾಗ ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುತ್ತಿದ್ದ ರೋಗಿಗಳಲ್ಲಿ 62% ರಷ್ಟು ಸಾವಿನ ಸಾಧ್ಯತೆ ಕಡಿಮೆಯಾಯ್ತು.ಹಾಗೂ 35% ರಷ್ಟು ರೋಗ ಮರುಕಳಿಕೆಯ ಸಾಧ್ಯತೆ ಕಡಿಮೆಯಾಯ್ತು. ಸ್ತನ ಕಾನ್ಸರ್ ಗೆ ಈಡಾದ ಮಹಿಳೆಯರು ಅವರ ದೈನಿಕ ಆಹಾರ ಪದ್ದತಿಯಲ್ಲಿ ಹೂಕೋಸು ಜಾತಿಗೆ ಸೇರಿದ ಹಸಿರು ತರಕಾರಿಗಳಾದ ಹೂಕೋಸು,ಕ್ಯಾಬೇಜ್, ಬ್ರೋಕೋಲಿ, ನವಿಲು ಕೋಸು, ಮೂಲಂಗಿ ಹಸಿರು ಸೊಪ್ಪುಗಳು ಮುಂತಾದ ಹಸಿರು ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಎನ್ನುತ್ತಾರೆ ಸಂಶೋಧನೆ ನಡೆಸಿದ ಸಾರಾ ಜೆ ನಚ್ಚುತ. ಈ ಕೋಸು ಜಾತಿಯ ತರಕಾರಿಗಳಲ್ಲಿ ಕಂಡುಬರುವ isothiocyanates ಮತ್ತು indoles ಎನ್ನುವ ಪೈತೋಕೆಮಿಕಲ್ಸ್ ಗಳು ಕೆಲವು ಕಾನ್ಸರ್ ಗಳನ್ನು ತಡೆಗಟ್ಟುವ ಗುಣ ಹೊಂದಿವೆ ಎಂದು ವಿಜ್ನಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಿದೆ ಎಂದು ಅಧ್ಯಯನ ನಡೆಸಿದ ಇಂಗ್ರಾಮ್ ಕಾನ್ಸರ್ ಸೆಂಟರ್ ವಿಜ್ನಾನಿಗಳ ಅಭಿಪ್ರಾಯ.
ಭಾರತದಲ್ಲಿ ಗಣನೀಯವಾಗಿ ಏರುತ್ತಿರುವ ಸ್ತನ ಕಾನ್ಸರ್
ಸ್ತನ ಕಾನ್ಸರ್ ಜಗತ್ತಿನಾದ್ಯಂತ ಗ್ಂಭೀರವಾಗಿ ಏರುತ್ತಿದೆ. ಅದರಲ್ಲೂ ಭಾರತದಂಥ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಸ್ತನ ಕಾನ್ಸರ್ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಕಳೆದ ಎರಡು ದಶಕದಲ್ಲಿ ಭಾರತದಲ್ಲಿ ಸ್ತನ ಕಾನ್ಸರ್ ದ್ವಿಗುಣಗೊಂಡಿದೆ. 2010 ರಲ್ಲಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಸ್ತನ ಕಾನ್ಸರ್ ಪ್ರಕರಣಗಳು ದಾಖಲಾಗಿದ್ದು, 8882 ಮರಣಗಳು ದಾಖಲಾಗಿವೆ. ಎರಡನೆಯ ಸ್ಥಾನದಲ್ಲಿ ಮಹಾರಾಷ್ಟ್ರ (5064), ಬಿಹಾರ್ (4518) ಪಶ್ಚಿಮ ಬಂಗಾಳ (4095), ಆಂಧ್ರ ಪ್ರದೇಶ (3863), ಮಧ್ಯ ಪ್ರದೇಶ (3179), ರಾಜಸ್ಥಾನ (3097). ಕರ್ನಾಟಕದಲ್ಲಿ 1982 ರಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 15.8 ಅನುಪಾತದಲ್ಲಿದ್ದ ಕಾನ್ಸರ್ ಪ್ರಕರಣಗಳು 2005 ರಲ್ಲಿ 32.2 ರಷ್ಟಾಗಿದೆ. ರೀತಿಯ ಹಠಾತ್ ಏರಿಕೆಗೆ ಕಾರಣ ತಜ್ನರ ಊಹೆಯ ಪ್ರಕಾರ ಆರ್ಥಿಕ ಸುಧಾರಣೆಯ ಜೊತೆ ಜೊತೆಗೆ ನಡೆಯುತ್ತಿರುವ ತೀವ್ರ ನಗರೀಕರಣ, ಮಹಿಳೆಯರ ಜೀವನ ಶೈಲಿಯಲ್ಲಿ ಬದಲಾವಣೆ, ತಡವಾಗಿ ಮದುವೆಯಾಗುವುದು ಹಾಗೂ ತಡವಾಗಿ ಮಕ್ಕಳನ್ನು ಹೊಂದುವುದು, ಕಡಿಮೆ ಮಕ್ಕಳನ್ನು ಹೊಂದುವುದು, ಅಲ್ಪಾವಧಿಯವರೆಗೆ ಮಾತ್ರ ಮಗುವಿಗೆ ಹಾಲುಣಿಸುವುದು ಹಾಗೂ ಇವುಗಳ ಜೊತೆಗೆ ಪರಿಸರ ಮಾಲಿನ್ಯ, ವಾತಾವರಣದಲ್ಲಿನ ಬದಲಾವಣೆಗಳೂ ಕೂಡ ಕಾರಣವಾಗಿರಬಹುದು ಎಂಬುದು ತಜ್ನರ ಅಭಿಪ್ರಾಯ. ಅಲ್ಲದೇ, ವಿವಿಧ ಅಧ್ಯಯನಗಳಿಂದ ಬೆಳಕಿಗೆ ಬಂದ ಇನ್ನೊಂದು ಆತಂಕಕಾರಿ ಬೆಳವಣಿಗೆಯೆಂದರೆ ಸಾಮಾನ್ಯವಾಗಿ 40-50 ಪ್ರಾಯದ ಮಹಿಳೆಯರಲ್ಲಿ ಕಂಡುಬರುತ್ತಿದ್ದ ಕಾನ್ಸರ್ ಪ್ರಕರಣಗಳು ಈಗೀಗ 30-40 ವರ್ಷ ಪ್ರಾಯದ ಮಹಿಳೆಯರಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನ ಮಹಿಳೆಯರು ಅಂದರೆ 30-40 ವರ್ಷ ಪ್ರಾಯದ ಮಹಿಳೆಯರಲ್ಲಿ ಸ್ತನ ಕಾನ್ಸರ್ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಕೆಳಗಿನ ಗ್ರಾಫ್ ನಲ್ಲಿ ನೋಡಬಹುದು.
.

ಸ್ತನ ಕಾನ್ಸರ್ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವುದು ಅಗತ್ಯ.
ನಮ್ಮ ದೇಶದಲ್ಲಿ ಈಗಿನ ಸಧ್ಯದ ಪರಿಸ್ಥಿತಿಯಲ್ಲಿ ಸ್ತನ ಕಾನ್ಸರ್ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ನಮ್ಮ ದೇಶದಲ್ಲಿ ಸ್ತನ ಕಾನ್ಸರ್ ಗೆ ಒಳಗಾದ ಹೆಚ್ಚಿನ ಮಹಿಳೆಯರಲ್ಲಿ ಕಾನ್ಸರ್ ಇರುವುದು ಪತ್ತೆಯಾಗುವುದು ರೋಗ ಉಲ್ಬಣವಾಗಿ 3 ನೇ ಹಂತ ಅಥವಾ 4 ನೇ ಹಂತ ತಲುಪಿದಾಗ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಅಮೇರಿಕಾದಲ್ಲಿ 75% ರಷ್ಟು ಕಾನ್ಸರ್ ರೋಗಿಗಳಲ್ಲಿ 1 ಮತ್ತು 2 ನೇ ಹಂತದಲ್ಲಿಯೇ ರೋಗ ಪತ್ತೆಯಾಗುತ್ತದೆ. ರೋಗದ ಆರಂಭಿಕ ಹಂತದಲ್ಲಿಯೇ ಪತ್ತೆಯಾಗಿ ಚಿಕಿತ್ಸೆ ಶುರು ಮಾಡಿದಾಗ ರೋಗದಿಂದ ಮರಣಿಸುವವರ ಸಂಖ್ಯೆಯೂ ಕಡಿಮೆ. ಸ್ತನ ಕಾನ್ಸರ್ ಆರಂಭಿಕ ಲಕ್ಷಣಗಳು, ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವುದು ಹಾಗೂ ಅಂತ ಲಕ್ಷಣಗಳು ಕಂಡ ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಒಳಿತು ಎಂಬುದನ್ನು ಮಹಿಳೆಯರಿಗೆ ಮನದಟ್ಟು ಮಾಡಿಸುವುದು ಈಗ ಸಧ್ಯದ ಅಗತ್ಯತೆ.
----------------ದಿಕ್ಷೂಚಿ   ಮೇ 2012  ರಲ್ಲಿ ಪ್ರಕಟವಾದ ಬರಹ.

No comments:

Post a Comment