Tuesday, June 4, 2013

ಟಿಬೆಟ್ ನಲ್ಲಿ ಸಿದ್ದಗೊಳ್ಳುತ್ತಿರುವ ಏಷ್ಯಾದ ಅತೀ ದೊಡ್ಡ ಬಾಹ್ಯಾಕಾಶ ವೀಕ್ಷಣಾಲಯ



ಏಷ್ಯಾದ ಬಾಹ್ಯಾಕಾಶ ವಿಜ್ನಾನಿಗಳ ಬಹುದಿನಗಳ ಕನಸು ನನಸಾಗುವ ಸೂಚನೆಗಳು ಕಂಡುಬರುತ್ತಿವೆ. ಎತ್ತರದ ಪರ್ವತ ಶಿಖರದಲ್ಲಿ ಒಂದು ಅತ್ಯಾಧುನಿಕ ಹಾಗೂ ಉತ್ಕೃಷ್ಟ ಮಟ್ಟದ ಒಂದು ಅಂತರಿಕ್ಷ ವೀಕ್ಷಣಾಲಯವನ್ನು ಹೊಂದುವ ಮಹತ್ವಾಕಾಂಕ್ಷೆ ಈಡೇರುವ ಲಕ್ಷಣಗಳು ಕಂಡುಬರುತ್ತಿದೆ. ಪ್ರಶಸ್ತ ಸ್ಥಳಕ್ಕಾಗಿ 2 ದಶಕಗಳ ಸತತ ಹುಡುಕಾಟದ ನಂತರ ಎಲ್ಲಾ ರೀತಿಯಲ್ಲೂ ಸರಿಹೊಂದುವ ಒಂದು ಪ್ರದೇಶವನ್ನು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ವೀಕ್ಷಣಾಲಯಕ್ಕಾಗಿ  ಪರಿಗಣಿಸಲಾಗುತ್ತಿದೆ. ಟಿಬೆಟ್ ದೇಶದ ನೈರುತ್ಯ ಭಾಗದಲ್ಲಿರುವ ಅತಿ ಎತ್ತರದ ನಗರಿಎಂಬ ಪರ್ವತವನ್ನು ಬಾಹ್ಯಾಕಾಶ ವೀಕ್ಷಣಾಲಯವನ್ನು ನಿರ್ಮಿಸಲು ಸೂಕ್ತ ಪ್ರದೇಶ ಎಂದು ವಿಜ್ನಾನಿಗಳು ಪರಿಗಣಿಸಿದ್ದಾರೆ. ಕಾಶ್ಮೀರ ಪರ್ವತ ಶ್ರೇಣಿಗಳ ಗಡಿಯಲ್ಲಿರುವ ಈ ನಗರಿಎಂಬ ಪರ್ವತ ಸಮುದ್ರ ಮಟ್ಟದಿಂದ 5100 ಮೀಟರ್ ಎತ್ತರದಲ್ಲಿದೆ. ನಗರಿ ಪರ್ವತದ ಶಿಂಕ್ವಾನ್ನೆ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ವೀಕ್ಷಣಾಲಯ ಜಗತ್ತಿನ ಅತ್ಯಂತ ಎತ್ತರದ ವೀಕ್ಷಣಾಲಯವಾಗಲಿದೆ. ಜಗತ್ತಿನ ಅತ್ಯಂತ ಉತ್ಕ್ರಷ್ಟ, ಅತ್ಯಾಧುನಿಕ ಹಾಗೂ ಅತಿ ಎತ್ತರದ ವೀಕ್ಷಣಾಲಯಗಳಾದ ಅಮೆರಿಕಾದ ಹವಾಯಿ ಪ್ರದೇಶದ ಮೌನಾ ಕೀಯಾ ವೀಕ್ಷಣಾಲಯ ಹಾಗೂ ಚೈಲ್ ದೇಶದ ಅಟಕಾಮಾ ಮರುಭೂಮಿಯಲ್ಲಿರುವ ವೀಕ್ಷಣಾಲಯ ಮತ್ತು ಸ್ಪೈನ್ ನ ಕ್ಯಾನರಿ ಐಲಾಂಡ್  ವೀಕ್ಷಣಾಲಯಗಳ ಸಾಲಿಗೆ ಈಗ ಏಷ್ಯದಲ್ಲಿ ನಿರ್ಮಿಸಲು ಯೋಜಿಸುತ್ತಿರುವ ಈ ಶಿಂಕ್ವಾನ್ನೆ ವೀಕ್ಷಣಾಲಯ ಕೂಡ ಸೇರಲಿದೆ ಎಂದು ಬಾಹ್ಯಾಕಾಶ ವಿಜ್ನಾನಿಗಳು ಅಭಿಪ್ರಾಯಪಡುತ್ತಿದ್ದಾರೆ.  ಆದರೆ ಈ ಶಿಂಕ್ವಾನ್ನೆ ವೀಕ್ಷಣಾಲಯದ ನಿರ್ಮಾಣ ಪ್ರಾರಂಭವಾಗಲು ಇನ್ನೂ ಒಂದು ಅಂತಿಮ ಮಟ್ಟದ ಸ್ಥಳ ಪರೀಕ್ಷೆಗಳು ನಡೆಯಬೇಕಿದೆ. ಈ ವರ್ಷ ಶುರುವಾಗಲಿರುವ ಅತಿ ಪ್ರಮುಖ ಹಾಗೂ ಅಂತಿಮ ಮಟ್ಟದ ಪರೀಕ್ಷೆಯಲ್ಲಿ ವಿಜ್ನಾನಿಗಳು ಸತತವಾಗಿ ಈ ಪ್ರದೇಶದ ವಾತಾವರಣದ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಹಾಗೂ ಪ್ರಯೋಗಾತ್ಮಕವಾಗಿ ಟೆಲಿಸ್ಕೋಪ್ ವೀಕ್ಷಣೆ ನಡೆಸಲಿದ್ದಾರೆ. ಚೀನಾದ ಬಾಹ್ಯಾಕಾಶ ವಿಜ್ನಾನಿಗಳು ಇನ್ನೂ ಒಂದು ಹಂತ ಮುಂದುವರೆದು ಈ  ಶಿಂಕ್ವಾನ್ನೆ ವೀಕ್ಷಣಾಲಯಕ್ಕಾಗಿ ಎರಡು ಮೇಗಾಫೆಸಿಲಿಟಿಗಳನ್ನು ತಯಾರಿಸುವ ಯೋಜನೆಯಲ್ಲಿ ನಿರತರಾಗಿದ್ದಾರೆ. ಅದೇನೆಂದರೆ ಯುರೋಪ್ಸ್ ಎಕ್ಸ್ಟ್ರೀಮ್ಲಿ ಲಾರ್ಜ್ ಟೆಲಿಸ್ಕೋಪ್(ELT)  ಎಂಬ ಜಗತ್ತಿನ ಅತಿ ದೊಡ್ಡ ಟೆಲಿಸ್ಕೋಪ್ ಗೆ ಸರಿಸಮನಾದ ಟೆಲಿಸ್ಕೋಪ್ ನ ತಯಾರಿಕೆಯ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಅದಲ್ಲದೇ, ಲಾರ್ಜ್ ಸ್ಕೈ ಏರಿಯಾ ಮಲ್ಟಿ ಒಬ್ಜೆಕ್ಟ್ ಫೈಬರ್ ಸ್ಪೆಕ್ಟ್ರೋಸ್ಕೋಪಿಕ್ ಟೆಲಿಸ್ಕೋಪ್ (LAMOST) ಎಂಬ ಉಪಕರಣದ ಯೋಜನೆ ಸಿದ್ದಪಡಿಸುತ್ತಿದ್ದಾರೆ. ಈ ಎಲ್ಲ ಅತ್ಯಾಧುನಿಕ ಪರಿಕರಣಗಳಿಂದ ಸಿದ್ದಗೊಳ್ಳುವ ಈ ವೀಕ್ಷಣಾಲಯ ಏಷ್ಯಾದ ಅತಿ ದೊಡ್ಡ ವೀಕ್ಷಣಾಲಯವಷ್ಟೇ ಅಲ್ಲದೇ ಇತರ ಅಂತರ್ರಾಷ್ಟ್ರೀಯ ವೀಕ್ಷಣಾಲಯಗಳ ಮಾದರಿಗೆ ಸೇರಲಿದೆ.
ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ವೀಕ್ಷಣಾಲಯಗಳ ಮಾದರಿಯಲ್ಲೇ ಏಷ್ಯಾದಲ್ಲೊಂದು ವೀಕ್ಷಣಾಲಯ ಸ್ಥಾಪಿಸಬೇಕೆಂಬ ಉದ್ದೇಶದಿಂದ ಪ್ರಶಸ್ತ ಸ್ಥಳಕ್ಕಾಗಿ 1993 ರಲ್ಲಿ ಹುಡುಕಾಟ ಶುರುವಾಯ್ತು.  ಚೀನಾದ ನಾಂಜಿಂಗ್ ಎಂಬ ಪ್ರದೇಶದಲ್ಲಿರುವ ಪರ್ಪಲ್ ಮೌಂಟೇನ್ ಒಬ್ಸರ್ವೇಟರಿ ಎಂಬ ವೀಕ್ಷಣಾಲಯದ ಲಿಯೂ ಕೈಪಿನ್ ಎಂಬ ಬಾಹ್ಯಾಕಾಶ ವಿಜ್ನಾನಿಯ ನೇತ್ರತ್ವದಲ್ಲಿ ಶುರುವಾದ ಈ ಸ್ಥಳ ಪರೀಕ್ಷಣೆ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಮುನ್ನುಡಿಯಾಯಿತು. ಪ್ರಾರಂಭದಲ್ಲಿ ಚೈನಾ ಹಾಗೂ ಟಿಬೆಟ್ ಗಡಿಭಾಗದಲ್ಲಿರುವ ಕ್ವಿಂಗೈ-ಟಿಬೇಟಿಯನ್ ಪರ್ವತ ಪ್ರದೇಶಗಳಲ್ಲಿ ಸ್ಥಳ ಸಮೀಕ್ಷೆ ನಡೆಸಲ್ಪಟ್ಟಿತು. ಆದರೆ ಈ ಪ್ರದೇಶ ಅಂತರ್ರಾಷ್ಟ್ರೀಯ ವೀಕ್ಷಣಾಲಯಕ್ಕೆ ಸರಿ ಹೊಂದದೇ ಪ್ರತಿಕೂಲ ವಾತಾವರಣ ಕಂಡುಬಂದಿದ್ದರಿಂದ ವಿಜ್ನಾನಿಗಳ ತಂಡಕ್ಕೆ ಅತೀವ ನಿರಾಶೆಯಾಯ್ತು. ನಂತರ 2000 ನೇ ಇಸವಿಯಲ್ಲಿ ಟಿಬೆಟ್ ನ ದಕ್ಷಿಣ ಭಾಗದಲ್ಲಿರುವ ಟಿಂಗ್ರಿ ಎಂಬ ಪರ್ವತದಲ್ಲಿ ಸ್ಥಳ ಪರೀಕ್ಷೆ ನಡೆಸಿದಾಗಲೂ ಅಲ್ಲಿಯೂ ಕೂಡ ಪ್ರತಿಕೂಲಕರ ವಾತಾವರಣ ಕಂಡುಬಂದಿದ್ದರಿಂದ ವಿಜ್ನಾನಿಗಳ ತಂಡಕ್ಕೆ ಮತ್ತೊಮ್ಮೆ ನಿರಾಶೆಯಾಯ್ತು. ಚೀನಾ, ಜಪಾನ್, ಸೌತ್ ಕೊರಿಯಾ ಮತ್ತು ತೈವಾನ್ ದೇಶಗಳ ಸಹಯೋಗದಲ್ಲಿ ನಿಯೋಜಿಸಲಾದ ವಿಜ್ನಾನಿಗಳ ಟೀಮ್ ಗೆ ಸುಮಾರು ಒಂದು ದಶಕಗಳ ಕಾಲ ಹೇಳಿಕೊಳ್ಳುವಂತ ಯಾವುದೇ ಬೆಳವಣಿಗೆಯನ್ನು ಸಾಧಿಸಲಾಗಲಿಲ್ಲ. ಆದರೂ ಪ್ರಯತ್ನ ಬಿಡದ ಈ ಟೀಮ್ ಏಶಿಯಾದಲ್ಲಿ ಒಂದು ಅತ್ಯಾಧುನಿಕ ಬಾಹ್ಯಾಕಾಶ ವೀಕ್ಷಣಾಲಯದ ನಿರ್ಮಾಣಕ್ಕಾಗಿ ಪ್ರಶಸ್ತ ಸ್ಥಳದ ಹುಡುಕಾಟದಲ್ಲಿಯೇ ತೊಡಗಿಕೊಂಡಿತ್ತು. ಅಂತೂ 2005 ರ ವೇಳೆಗೆ ಟಿಬೆಟ್ ನ ಈ ನಗರಿ ಪ್ರರ್ವತ ಪ್ರದೇಶ ಪರೀಕ್ಷೆಗೆ ವಿಜ್ನಾನಿಗಳನ್ನು ನಿಯೋಜಿಸಿದರು. ಸ್ಥಳ ಪರೀಕ್ಷೆಯಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಯ್ತು. ಕ್ಲೌಡ್ ಕವರೇಜ್, ವಿಂಡ್ ಸ್ಪೀಡ್ ಅಂದರೆ ಗಾಳಿಯ ವೇಗ, ವಾಟರ್ ವೆಪೋರ್ ಹಾಗೂ ಟೆಲಿಸ್ಕೋಪ್ ನಿಂದ ಆಕಾಶ ವೀಕ್ಷಣೆಯಲ್ಲಿನ ಸ್ಪಷ್ಟತೆ ಇವುಗಳನ್ನು ಪ್ರಮುಖ ಮಾಪನಗಳನಾಗಿಟ್ಟುಕೊಂಡು ಸ್ಥಳ ಪರೀಕ್ಷಣೆ ಮಾಡಲಾಯ್ತು. ನಗರಿ ಪರ್ವತ ಪ್ರದೇಶದಲ್ಲಿ ಕೆಲಸಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಜನವಸತಿಯೇ ಇಲ್ಲದ ಆ ಪ್ರದೇಶದಲ್ಲಿ ಯಾವ ಮೂಲಭೂತ ಸೌಲಭ್ಯಗಳೂ ಇರಲಿಲ್ಲ. ಅಲ್ಲದೇ, ರಸ್ತೆಯೂ ಕೂಡ ಇಲ್ಲದಿದ್ದುದರಿಂದ ಆ ಪ್ರದೇಶವನ್ನು ತಲುಪಲು ಒಂದು ದಿನಕ್ಕೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಅಲ್ಲದೇ, ಸಮುದ್ರ ಮಟ್ಟದಿಂದ ಅತಿ ಎತ್ತರದ ಪ್ರದೇಶವಾಗಿದ್ದುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿತ್ತು. ಅಲ್ಲಿ ಪ್ರಾಥಮಿಕ ಹಂತಗಳಲ್ಲಿ ಕೆಲಸ ಮಾಡಿದ ಹಾಗೂ ಸ್ಥಳ ಪರೀಕ್ಷೆಯಲ್ಲಿ ಪಾಲ್ಗೊಂಡ ಚೀನಾದ  ನ್ಯಾಷನಲ್ ಆಷ್ಟ್ರೋನೋಮಿಕಲ್ ಒಬ್ಸರ್ವೇಟರೀಸ್ ಆಫ್ ದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ನ ವಿಜ್ನಾನಿ ಯಾವೋ ಯಾಂಗ್ಕ್ವಿಯಾಂಗ್ ಹೇಳುವಂತೆ  ನಗರಿ ಪ್ರದೇಶಕ್ಕೆ ಹೋಗುವಾಗ ಕಾರಿನ ಒಂದೊಂದು ಟೈರ್ ನ್ನೂ 4-5 ಸಲ ಬದಲಿಸಬೇಕಾದ ಪರಿಸ್ತಿತಿ ಉಂಟಾಗುತ್ತಿತ್ತು. ಆದರೆ ಅಷ್ಟೆಲ್ಲ ಕಷ್ಟ ಪಟ್ಟು ನಡೆಸಿದ ಪರೀಕ್ಷಣೆ ವ್ಯರ್ಥವಾಗಲಿಲ್ಲ. 2007 ರ ವೇಳೆಗೆ  ಬಾಹ್ಯಾಕಾಶ ವೀಕ್ಷಣಾಲಯ ನಿರ್ಮಿಸಲು ನಗರಿ ತುಂಬಾ ಪ್ರಶಸ್ತ ಸ್ಥಳ ಎಂಬುದು ಖಚಿತವಾಗಿತ್ತು. 2007 ರಲ್ಲಿಯೇ ಸ್ಥಳ ನಿಗದಿಯಾದರೂ 2008 ರಲ್ಲಿ ಟಿಬೆಟ್ ನಲ್ಲಿ ಶುರುವಾದ ದಂಗೆಯಿಂದಾಗಿ ವೀಕ್ಷಣಾಲಯ ನಿರ್ಮಾಣದ ಮುಂದಿನ ಯೋಜನಾಕಾರ್ಯಗಳಿಗೆ ತೊಡಕು ಉಂಟಾಯ್ತು. ಅದೇ ವರ್ಷದ ಅಂತ್ಯದ ವೇಳೆಗೆ ಟಿಬೆಟ್ ನಲ್ಲಿ ಶಾಂತಿ ನೆಲೆಸಿದ ಮೇಲೆ ಮತ್ತೆ ಯೋಜನಾಕಾರ್ಯ ಶುರು ಮಾಡುವ ಹೊತ್ತಿಗೆ ಅಲ್ಲಿನ ಪರಿಸರವೂ ಕೂಡ ವಾಸ ಯೋಗ್ಯವಾಗಿ ಕೆಲಸ ಮಾಡಲು ಅನುಕೂಲಕರ ವಾತಾವರಣವೇರ್ಪಟ್ಟಿತ್ತು. 2010 ರಲ್ಲಿ ನಗರಿಯ ರಾಜಧಾನಿ ನಗರವಾದ ಶಿಂಕ್ವಾನ್ನೆ ಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಿಸಲಾಯ್ತು. ಇದರಿಂದಾಗಿ ಅಲ್ಲಿಗೆ ತಲುಪಲು ಮಾಡಬೇಕಾಗಿದ್ದ ಪರ್ವತಾರೋಹಣದ ಕಷ್ಟ ನಿವಾರಣೆಯಾಯ್ತು. ಹಾಗೆಯೇ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಿಕೊಳ್ಳಲು ಸಾಧ್ಯವಾಯ್ತು. ಸ್ಯಾಟಲೈಟ್ ಡಿಷ್ ಗಳನ್ನು ಅಳವಡಿಸಿ ದೂರವಾಣಿ ಸಂಪರ್ಕ ಏರ್ಪಡಿಸಿಕೊಳ್ಳಲಾಯ್ತು.
ನಗರಿಯಲ್ಲಿ ಕೈಗೊಂಡ ಪ್ರಾಥಮಿಕ ಪ್ರಯೋಗಗಳು ಮಿಶ್ರ ಫಲವನ್ನು ನೀಡಿವೆ. ಚೀನಾದ ವಿಜ್ನಾನಿ ಯಾವೋ ಪ್ರಕಾರ ಪ್ರಾಥಮಿಕವಾಗಿ ವಿಜ್ನಾನಿಗಳು ಅಂದುಕೊಂದಷ್ಟು  ಗಾಳಿಯ ಬಿರುಸು ಇಲ್ಲದಿರುವುದು ಸಮಾಧಾನಕರ ವಿಷಯ. ಆದರೆ ಮಾನ್ಸೂನ್ ನ ಸಮಯದಲ್ಲಿ ಹೆಚ್ಚಿನ ದಿನಗಳಲ್ಲಿ ಮೋಡ ಕವಿದಿರುವುದರಿಂದ ಬಾಹ್ಯಾಕಾಶ ವೀಕ್ಷಣೆಗೆ ಸಾಧ್ಯವಾಗುವುದಿಲ್ಲ. ಆದರೆ ಈ ತೊಡಕುಗಳನ್ನು ಬಿಟ್ಟರೆ ನಗರಿ ಅತ್ಯುತ್ತಮ ಬಾಹ್ಯಾಕಾಶ ವೀಕ್ಷಣಾಲಯವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಇನ್ನೋರ್ವ ವಿಜ್ನಾನಿ ಕೈಫು ಅವರ ಅಭಿಪ್ರಾಯ. ವಿಜ್ನಾನಿ ಕೈಫು ಹೇಳುವಂತೆ ನಗರಿಯಲ್ಲಿ ನ ಟೆಲಿಸ್ಕೋಪ್ ಗಳು ಮೌನಾ ಕೀಯಾ ದಲ್ಲಿನ ಟೆಲಿಸ್ಕೋಪ್ ಗಿಂತ 30% ಹೆಚ್ಚು ಫೋಟೋನ್ ಗಳನ್ನು ಮಿಡಿಲ್ ಇನ್ಫ್ರೆರೆಡ್ ಬ್ಯಾಂಡ್ ನಲ್ಲಿ ಸೆರೆಹಿಡಿಯುತ್ತವೆ.
ಮುಂದಿನ ಬೇಸಿಗೆಯ ವೇಳೆಗೆ ಈ ಯೋಜನೆಗೆ ಕೈಜೋಡಿಸಿದ ಎಲ್ಲ ದೇಶಗಳ ವಿಜ್ನಾನಿಗಳು ಚೀನಾದಲ್ಲಿ ಸಭೆ ಸೇರಲಿದ್ದು ನಗರಿ ವೀಕ್ಷಣಾಲಯಕ್ಕೆ ಬೇಕಾದ ಟೆಲಿಸ್ಕೋಪ್ ಗಳ ಬಗ್ಗೆ ನಿರ್ಧರಿಸಲಿದ್ದಾರೆ. ತೈವಾನ್ ದೇಶ 50-ಸೆಂಟಿಮೀಟರ್ ಗಳ ಆಪ್ಟಿಕಲ್ ಟೆಲಿಸ್ಕೋಪ್ ನ್ನು ನಗರಿ ವೀಕ್ಷಣಾಲಯಕ್ಕೆ ಕಳಿಸುವ ಇಂಗಿತ ವ್ಯಕ್ತಪಡಿಸಿದೆ. ಜಪಾನ್ ದೇಶವು 60-ಸೆಂಟಿಮೀಟರ್ ಗಳ ಆಪ್ಟಿಕಲ್ ಮತ್ತು ಇನ್ಫ್ರೆರೆಡ್ ಟೆಲಿಸ್ಕೋಪ್ ಗಳನ್ನು ಕಳಿಸುವ ಯೋಚನೆ ಹೊಂದಿದೆ. ಚೀನಾ ದೇಶವು ಎರಡು ಅತೀ ದೊಡ್ಡ ಟೆಲಿಸ್ಕೋಪ್ ಗಳನ್ನು ತಯಾರಿಸುವ ಯೋಜನೆ ಸಿದ್ದಪಡಿಸುತ್ತಿದೆ.
ನಗರಿಯ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ಅವಶ್ಯಕವೆನಿಸುವ ಇನ್ನೂ ಹಲವು ರೀತಿಯ ಉಪಕರಣಗಳನ್ನು ನಿರ್ಧರಿಸಲು ಮುಂದಿನ 2-3 ವರ್ಷಗಳಲ್ಲಿ ವೀಕ್ಷಣಾಲಯದಲ್ಲಿ ಸಂಗ್ರಹಿಸುವ ದಾಖಲೆಗಳು ದೊರೆತ ಮೇಲಷ್ಟೇ ನಿರ್ಧರಿಸಲು ಸಾಧ್ಯ ಎಂದು ವಿಜ್ನಾನಿ ಕೈಫು ಹೇಳುತ್ತಾರೆ. ಆದರೆ ಹಲವರನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ಚೈನೀಸ್ ಸರಕಾರವು ಕಾಲಕಾಲಕ್ಕೆ ಫಾರಿನರ್ಸ್ ಗಳಿಗೆ ಟಿಬೆಟ್ ಗೆ ಬರಲು ಅನುಮತಿ ನಿಷೇದಿಸುತ್ತಿರುತ್ತದೆ. ಇದರಿಂದ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ತೊಡಕಾಗಬಹುದು ಎಂಬುದು ಹಲವರ ಅಭಿಪ್ರಾಯ. ಚೈನೀಸ್ ವಿಜ್ನಾನಿಗಳು ಚೈನಾ ಸರಕಾರದೊಡನೆ ಈ ವಿಷಯವಾಗಿ ಚರ್ಚೆ ನಡೆಸುತ್ತಿವೆ. ಎಲ್ಲವೂ ಸರಾಗವಾದಲ್ಲಿ ಏಷಿಯಾದ ಬಾಹ್ಯಾಕಾಶ ವಿಜ್ನಾನಿಗಳ ಬಹುದಿನಗಳ ಕನಸು ಶೀಘ್ರದಲ್ಲೇ ನನಸಾಗಲಿದೆ

---- ದಿಕ್ಸೂಚಿ November 2012



No comments:

Post a Comment