Wednesday, April 3, 2013

ಒಂದು ಮುತ್ತಿನ ಕಥೆ



ಮುತ್ತುಗಳು ಪ್ರಕೃತಿಯ ಅಸಾಧಾರಣ ಅಮೂಲ್ಯ ಸೃಷ್ಟಿ. ಅತ್ಯಾಕರ್ಷಕವಾಗಿ ಹೊಳೆಯುವ ಸುಂದರ ಮುತ್ತುಗಳು ಭೂಪರಿಸರದಲ್ಲಿ ಹೇಗೆ ಉತ್ಪಾದನೆಯಾಗುತ್ತವೆ ಎಂಬುದು ಪೃಕೃತಿಯ ಒಂದು ವಿಸ್ಮಯಕಾರಿ ರೋಚಕ ಕಥೆ. ಎಲ್ಲ ವಜ್ರ ವೈಡೂರ್ಯಗಳು ಆಭರಣ ಯೋಗ್ಯ ಲೋಹಗಳು ಭೂಮಿಯಲ್ಲಿನ ಲೋಹದ ಗಣಿಗಳಿಂದ ಸಿಗುತ್ತವೆ. ಆದರೆ ಮುತ್ತು ಎಂಬ ಅಪೂರ್ವ ವಸ್ತುವಿನ ಜನನ ಮಾತ್ರ ಪ್ರಕೃತಿಯ ಒಂದು ಅದ್ಭುತ ಸುವ್ಯಸ್ಥಿತ ಸೃಷ್ಟಿ. ಒಂದು ಜೀವಂತ ಸಮುದ್ರ ಜಂತುವಿನ ಚಿಪ್ಪಿನೊಳಗೆ ಸಿಗುವ ಮುತ್ತುಗಳು ತಯಾರಾಗುವುದು ಒಂದು ಜೈವಿಕ ಕ್ರಿಯೆಯಿಂದ ಎಂದು ಹೇಳಬಹುದು. ಒಯೆಸ್ಟರ್ ಎಂಬ ಸಮುದ್ರಜೀವಿಗಳ ಚಿಪ್ಪಿನೊಳಗಣ ಜೈವಿಕ ಕ್ರಿಯೆಯಿಂದ ಮುತ್ತುಗಳು ದೊರೆಯುತ್ತವೆ. ಒಯೆಸ್ಟರ್ ಕವಚದಿಂದ ಅಥವಾ ಚಿಪ್ಪಿನಿಂದ ಸಿಗುವ ಮುತ್ತುಗಳು ಸಿಗುವಾಗಲೇ ಪರಿಪೂರ್ಣವಾಗಿ ಸಿದ್ದವಾಗಿಯೇ ಸಿಗುತ್ತವೆ. ಯಾವುದೇ ಕಟಿಂಗ್ ಪೊಲೀಷಿಂಗ್ ಬೇಕಿಲ್ಲದೆ ಸಂಪೂರ್ಣ ಸಿದ್ದವಾಗಿ ತಾಯಾರಾಗಿ ಬರುವ ಮುತ್ತುಗಳು ನಿಜಕ್ಕೂ ನಿಸರ್ಗದ ಕೊಡುಗೆ. ಸಮುದ್ರದಿಂದ ಸಿಗುವ ಮುತ್ತುಗಳಲ್ಲಿ ಹೆಚ್ಚಿನವು ಒಯೆಸ್ಟರ್ ಜೀವಿಗಳಿಂದ ಸಿಕ್ಕರೂ ಇದೊಂದೇ ಅಲ್ಲದೆ ಇನ್ನೂ ಹಲವಾರು ಸಮುದ್ರ ಜೀವಿಗಳ ಚಿಪ್ಪುಗಳಲ್ಲಿಯೂ ಕೂಡ ಮುತ್ತು ರಚಿತವಾಗುತ್ತದೆ. ಮುಸ್ಸೆಲ್ಸ, ಕ್ಲಾಮ್ಸ್, ಸ್ಕಾಲ್ಲೋಪ್ಸ್, ಸೀ ಸ್ನೈಲ್ಸ್ ಮುಂತಾದ ಜೀವಿಗಳ ಚಿಪ್ಪುಗಳಲ್ಲಿಯೂ ಮುತ್ತುಗಳು ಸಿಕ್ಕರೂ ಇವು ಬಹಳ ವಿರಳ. ಸಾಲ್ಟ್ ವಾಟರ್ ಹಾಗೂ ಫ್ರೆಷ್ ವಾಟರ್ ಗಳಲ್ಲಿ ಮುತ್ತುಗಳು ಹೆಚ್ಚಾಗಿ ತಯಾರಾಗುತ್ತವೆ.


ಚಿಪ್ಪಿನಲ್ಲಿ ತಯಾರಾಗುವ ಮುತ್ತು.
ಒಯೆಸ್ಟರ್ ಜೀವಿಗಳ ದೇಹ ಚಿಪ್ಪಿನಿಂದ ಕೂಡಿರುತ್ತದೆ. ಜೀವಿಗಳು ಬೆಳೆದು ದೊಡ್ಡವಾಗುತ್ತಿದ್ದಂತೆ ಅವುಗಳ ಚಿಪ್ಪು ಕೂಡ ದೊಡ್ಡದಾಗುತ್ತದೆ. ಒಯೆಸ್ಟರ್ ಜೀವಿಗಳ ದೇಹಲ್ಲಿರುವ ಮಾಂಟಲ್ ಎಂಬ ಅಂಗ ಚಿಪ್ಪುಗಳನ್ನು ತಯಾರಿಸುತ್ತದೆ. ಜೀವಿಯ ಆಹಾರದಲ್ಲಿರುವ ಖನಿಜಾಂಶಗಳನ್ನು ಬಳಸಿಕೊಂಡು ಮಾಂಟಲ್ ಚಿಪ್ಪುಗಳನ್ನು ತಯಾರಿಸುತ್ತದೆ. ಮಾಂಟಲ್ ನಿಂದ ಉತ್ಪಾದಿಸಲ್ಪಡುವ ವಸ್ತುವಿಗೆ ನೆಕರ್ ಎನ್ನುತ್ತಾರೆ. ಚಿಪ್ಪುಗಳ ಒಳಮೈ ಪದರ ನೆಕರ್ ಗಳಿಂದ ಕೂಡಿರುತ್ತದೆ. ಒಯೆಸ್ಟರ್ ದೇಹದ ಅಂಗವಾದ ಮಾಂಟಲ್ ಮತ್ತು ಚಿಪ್ಪಿನ ನಡುವೆ ಬಾಹ್ಯ ವಸ್ತುಗಳ ಪ್ರವೇಶವಾದಾಗ ತನ್ನನ್ನು ತಾನು ಬಾಹ್ಯ ವಸ್ತುವಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಾಂಟಲ್ ತನ್ನ ನೆಕರ್ ಪದರಗಳನ್ನು ಬಾಹ್ಯ ವಸ್ತುವಿನ ಸುತ್ತ ಕವಚದಂತೆ ಕಟ್ಟಲು ಶುರು ಮಾಡುತ್ತದೆ. ಇದೇ ಕ್ರಮೇಣ ಮುತ್ತುಗಳಾಗಿ ಮಾರ್ಪಾಟಾಗುತ್ತವೆ. ಬಾಹ್ಯ ವಸ್ತುವಿನ ಸುತ್ತ ನೆಕರ್ ಪದರುಗಳು ಸುತ್ತಿಕೊಂಡು ತಯಾರಾದ ಗೋಲಾಕಾರದ ಕವಚವೇ ನಮಗೆ ಸಿಗುವ ಮುತ್ತುಗಳು. ಈ ನೆಕರ್ ಗೆ ಮದರ್ ಆಫ್ ಪರ್ಲ್ ಎಂದು ಕೂಡ ಕರೆಯುತ್ತಾರೆ. ಈ ನೆಕರ್ ನ ಚಿಪ್ಪಿನಿಂದ ಕೂಡ ಆಭರಣಗಳನ್ನು ತಯಾರಿಸುತ್ತಾರೆ. ಜೆವೆಲ್ಲರಿ ಷಾಪ್ ಗಳಲ್ಲಿ ಮಗೆ ಕಾಣಸಿಗುವ ಹೆಚ್ಚಿನ ಮುತ್ತುಗಳೆಲ್ಲ ಗೋಲಾಕಾರದ ಮುತ್ತುಗಳು. ಇವು ಉತ್ಕೃಷ್ಟ ಗುಣಮಟ್ಟದ ದುಬಾರಿ ಮುತ್ತುಗಳು. ಆದರೆ ಚಿಪ್ಪಿನಲ್ಲಿ ಸಿಗುವ ಎಲ್ಲ ಮುತ್ತುಗಳೂ ಗೋಲಾಕಾರವಾಗಿಯೇ ಇರುತ್ತವೆ ಎನ್ನುವ ಹಾಗಿಲ್ಲ. ಕೆಲವು ಮುತ್ತುಗಳು ಚಿಪ್ಪಿನಲ್ಲಿ ಚೆನ್ನಾಗಿ ಮೂಡಿಬರುವುದಿಲ್ಲ. ಕೆಲವೊಮ್ಮೆ ಗೋಲಾಕಾರವಾಗದೆ ವಿಭಿನ್ನ ಆಕೃತಿಗಳಲ್ಲಿ ಮೂಡಿಬರುತ್ತವೆ. ಮುತ್ತುಗಳಿಗೆ ಬಾರೋಕ್ ಮುತ್ತುಗಳು ಎನ್ನುತ್ತಾರೆ. ಅಲ್ಲದೆ ಮುತ್ತುಗಳು ವಿವಿಧ ಬಣ್ಣಗಳಲ್ಲಿ ಅಂದರೆ ಬಿಳಿ, ಕಪ್ಪು, ಬೂದು, ಸ್ವರ್ಣ ಬಣ್ಣ, ತಿಳಿ ಗುಲಾಬಿ ಬಣ್ಣ, ನೀಲಿ, ಹಸಿರು ಮುಂತಾದ ಇನ್ನೂ ಹಲವಾರು ಬಣ್ಣಗಳಲ್ಲಿ ದೊರೆಯುತ್ತವೆ.


                                                (photo Credit : Wikipedia)
19 ನೆಯ ಶತಮಾನದ ಪ್ರಾರಂಭದವರೆಗೂ ಮುತ್ತುಗಳು ಸಮುದ್ರದಿಂದಲೇ ದೊರೆಯುತ್ತಿತ್ತು. ಸಮುದ್ರದಲ್ಲಿ ಡೈವ್ ಮಾಡಿ ಸಮುದ್ರ ತಟದಿಂದ ಮುತ್ತುಗಳನ್ನು ಆಯ್ದು ತರುತ್ತಿದ್ದರು. ಹೀಗೆ ಸಮುದ್ರದಲ್ಲಿ ಪ್ರಕೃತಿ ಸ್ವಾಭಾವಿಕವಾಗಿ ತಯಾರಾದ ಮುತ್ತುಗಳು ಬಹಳ ದುಬಾರಿ ಮುತ್ತುಗಳು. ಆದರೆ ಇಂದು ಆಭರಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಹೆಚ್ಚಿನ ಮುತ್ತುಗಳು ಪರ್ಲ್ ಫಾರ್ಮಿಂಗ್ ನಿಂದಾಗಿ ಅಂದರೆ ಮುತ್ತು ವ್ಯವಸಾಯದಿಂದಾಗಿ ದೊರೆತಿರುವಂಥವು(ಕಲ್ಚರ್ಡ್ ಪರ್ಲ್ಸ್). ವಿವಿಧ ಪ್ರಬೇಧದ ಒಯೆಸ್ಟರ್ ಗಳು ಹಾಗೂ ಮುಸ್ಸೆಲ್ಸ್ ಗಳು ಮತ್ತಿತರ ಸಮುದ್ರ ಜೀವಿಗಳನ್ನು ಸಾಕಿ ಮಾನವ ಮಧ್ಯಸ್ಥಿಕೆಯಿಂದ ಒಂದು ಸಣ್ಣ ಬೀಜದಂತ ನ್ಯೂಕ್ಲಿಸ್ ಎಂಬ ವಸ್ತುವನ್ನು ಹಾಗೂ ಬೇರೆ ಒಯೆಸ್ಟರ್ ನ ಮಾಂಟಲ್ ನ ಒಂದು ಸಣ್ಣ ಚೂರನ್ನು ಸಮುದ್ರ ಜೀವಿಗಳ ಚಿಪ್ಪುಗಳಲ್ಲಿ ಸೇರಿಸಿ ಮುತ್ತು ತಯಾರಿಸುವಂತೆ ಮಾಡುತ್ತಾರೆ. ನೀರಿನ ಕೆರೆಗಳನ್ನು ನಿರ್ಮಿಸಿಕೊಂಡು ಅಥವಾ ನದಿಗಳಲ್ಲಿ ಮುತ್ತುಗಳ ವ್ಯವಸಾಯ ಮಾಡುತ್ತಾರೆ. ಹೀಗೆ ಕೃತಕ ವಿಧಾನದಿಂದ ಜೀವಿಗಳ ಮೂಲಕ ಮುತ್ತುಗಳನ್ನು ಬೆಳೆಯಲು 2 ರಿಂದ 4 ವರ್ಷಗಳು ಹಿಡಿಯುತ್ತವೆ. ಅವಧಿ ಸುತ್ತಲಿನ ವಾತಾವರಣ, ಸಾಕಿದ ಸಮುದ್ರ ಜೀವಿಯ ಪ್ರಬೇಧ, ಫ್ರೆಷ್ ವಾಟರ್, ಸಾಲ್ಟ್ ವಾಟರ್ ಹಾಗೂ ಇನ್ನೂ ಹಲವಾರು ಅಂಶಗಳ ಮೇಲೆ ಅವಲಂಬಿತವಾಗುತ್ತದೆ. ಫ್ರೆಷ್ ವಾಟರ್ ನಲ್ಲಿ ಮುಸ್ಸೆಲ್ ಎಂಬ ಜೀವಿಯಿಂದ ತಯಾರಿಸುವ ಮುತ್ತುಗಳು ಒಂದು ಜೀವಿಯಿಂದ ಒಂದೇ ಸಲಕ್ಕೆ 50 ಮುತ್ತುಗಳ ವರೆಗೆ ತಯಾರಿಸಬಲ್ಲದು. ಅದೇ ಸಾಲ್ಟ್ ವಾಟರ್ ನಲ್ಲಿ ವಿವಿಧ ಒಯೆಸ್ಟರ್ ಪ್ರಬೇಧದ ಜೀವಿಗಳಿಂದ ತಯಾರಿಸಲ್ಪಡುವ ಮುತ್ತುಗಳು ಒಂದು ಜೀವಿಯಿಂದ ಒಂದು ಸಲಕ್ಕೆ ಒಂದು ಅಥವಾ ಎರಡು ಮುತ್ತುಗಳು ಮಾತ್ರ ದೊರೆಯಬಲ್ಲವು. ಹಾಗಾಗಿ ಸಾಲ್ಟ್ ವಾಟರ್ ಮುತ್ತುಗಳು ಫ್ರೆಷ್ ವಾಟರ್ ಮುತ್ತುಗಳಿಗಿಂತ ದುಬಾರಿ. ಅಲ್ಲದೇ ಕಲ್ಚರ್ಡ್ ಮುತ್ತುಗಳು ಅಥವಾ ಕೃತಕ ವಿಧಾನದ ಮುತ್ತು ತಯಾರಿಕೆಯಲ್ಲಿ ಸಮುದ್ರ ಜೀವಿಗಳ ಹಲವು ಪ್ರಬೇಧಗಳನ್ನು ಬಳಸಿ ವಿವಿಧ ವಿಧಾನಗಳ ಮೂಲಕ ಮುತ್ತುಗಳ ಆಕಾರ, ಬಣ್ಣ, ಗುಣಮಟ್ಟ, ಗಾತ್ರಗಳನ್ನು ಪೂರ್ವ ನಿರ್ಧರಿಸಿ ಬೇಕಾದ ರೀತಿಯಲ್ಲಿ ಮುತ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುತ್ತುಗಳ ವ್ಯವಸಾಯ ಹೊಸ ಹೊಸ ವಿಧಾನಗಳನ್ನು ತಂತ್ರಜ್ನಾನಗಳನ್ನು ಅಳವಡಿಸಿಕೊಂಡು ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.


ಮುತ್ತುಗಳ ವಿವಿಧ ಬಗೆಗಳು.
ಈಗ ಆಭರಣದ ಅಂಗಡಿಗಳಲ್ಲಿ ಸಿಗುವ ಮುತ್ತುಗಳಲ್ಲಿ ಹಲವಾರು ಬಗೆಗಳು ಕಾಣಸಿಗುತ್ತವೆ. ಮುತ್ತುಗಳ ವಿಧಗಳಲ್ಲಿ ಅವುಗಳ ಆಕಾರ, ಅವು ದೊರೆಯುವ ವಿಧಾನ ಇತ್ಯಾದಿ ಹಲವು ಆಧಾರದ ಮೇಲೆ ಬೇರೆ ಬೇರೆ ಹಲವು ವಿಂಗಡನೆಗಳಿವೆ. ಮುತ್ತುಗಳು ದೊರೆಯುವ ವಿಧಾನವನ್ನು ಆಧರಿಸಿ ಎರಡು ಮುಖ್ಯ ವಿಂಗಡನೆಗಳಿವೆ 1) ಫ್ರೆಷ್ ವಾಟರ್ ಪರ್ಲ್ಸ್. 2) ಸಾಲ್ಟ್ ವಾಟರ್ ಪರ್ಲ್ಸ್.
ಮುತ್ತುಗಳು ಸಿಗುವ ಸ್ಥಳ, ಸಮುದ್ರ ಜೀವಿಯ ಪ್ರಬೇಧ, ಮುತ್ತುಗಳ ಬಣ್ಣ ಇವುಗಳನ್ನೆಲ್ಲಾ ಆಧರಿಸಿ ಇನ್ನೂ ಹಲವಾರು ಉಪವಿಂಗಡನೆಗಳಿವೆ. ಕೆಲವು ಪ್ರಮುಖ ಉಪವಿಂಗಡನೆಗಳೆಂದರೆ ಅಕೋಯಾ ಮುತ್ತುಗಳು, ಲೇಕ್ ಬಿವಾ ಮುತ್ತುಗಳು, ಸೌತ್ ಸೀ ಮುತ್ತುಗಳು, ತಹಿತಿಯನ್ ಅಥವಾ ಕಪ್ಪು ಮುತ್ತುಗಳು, ಪರ್ಶಿಯನ್ ಗಲ್ಫ್ ಮುತ್ತುಗಳು ಇತ್ಯಾದಿ ಇನ್ನೂ ನೂರಾರು ಬಗೆಯ ಮುತ್ತುಗಳಿವೆ.
ಅವುಗಳ ಆಕಾರದ ಆಧಾರದ ಮೇಲೆ ಮುಖ್ಯವಾಗಿ 3 ವಿಂಗಡನೆಗಳಿವೆ. : 1) ಸ್ಪೆರಿಕಲ್ ಮುತ್ತುಗಳು : ಸಂಪೂರ್ಣ ಗೋಲಾಕಾರ ಹಾಗೂ ಗೋಲಾಕೃತಿಗೆ ಹತ್ತಿರವೆನಿಸುವ ಆಕಾರದ ಮುತ್ತುಗಳು. 2) ಸಿಮ್ಮೆಟ್ರಿಕಲ್ ಮುತ್ತುಗಳು : ಮೊಟ್ಟೆಯಾಕಾರದ. ಓವಲ್ ಆಕಾರದ ಹಾಗೂ ಗೋಲಕ್ಕಿಂತ ಸ್ವಲ್ಪ ಉದ್ದದ ಮುತ್ತುಗಳು. 3) ಬರೋಕ್ ಮುತ್ತುಗಳು : ಇವು ನಿರ್ದಿಷ್ಟ ಆಕಾರವೆಂದು ಹೇಳಲಾಗದ ಬಿನ್ನ ಆಕಾರದ ಹೊರಮೈ ಹೊಂದಿರುವ ಮುತ್ತುಗಳು.
ಆದಿಮಾನವನಿಂದಲೇ ಮುತ್ತುಗಳ ಆವಿಷ್ಕಾರ.
ಸಾವಿರಾರು ವರ್ಷಗಳ ಹಿಂದೆಯೇ ಪುರಾತನ ಕಾಲದಲ್ಲೇ ಮುತ್ತುಗಳು ಪತ್ತೆಯಾಗಿ ಆದಿಮಾನವನ ಕಾಲದಲ್ಲೇ ಬಳಕೆಯಲ್ಲಿದ್ದವು. ಮಾನವ ನಾಗರೀಕತೆಗಳು ರೂಪುಗೊಳ್ಳುತ್ತಿದ್ದ ಕಾಲದಲ್ಲೇ ಮುತ್ತುಗಳು ಬಳಕೆಯಲ್ಲಿದ್ದ ಬಗ್ಗೆ ಹಲವಾರು ಪುರಾವೆಗಳು ಸಿಕ್ಕಿವೆ. ಬಹುಶಃ ಸಮುದ್ರ ತೀರದಲ್ಲಿ ಆಹಾರಕ್ಕಾಗಿ ಹುಡುಕುತ್ತಿರುವಾಗ ಒಯೆಸ್ಟರ್ ಹಾಗೂ ಅದರೊಳಗಿನ ಮುತ್ತು ದೊರಕಿರಬಹುದು. ಮೊತ್ತ ಮೊದಲ ಮುತ್ತು ಸಿಕ್ಕಿದ್ದು ಎಲ್ಲಿ ಎಂಬುದು ಖಾತ್ರಿಯಾಗಿ ತಿಳಿದಿಲ್ಲವಾದರೂ ಪರ್ಷಿಯನ್ ಗಲ್ಫ್ ರಾಷ್ಟ್ರಗಳ ಸಮುದ್ರ ತೀರಗಳಲ್ಲಿರಬಹುದು ಎಂಬುದು ಭೂವಿಜ್ನಾನಿಗಳ ಊಹೆ. ಪ್ರದೇಶಗಳಲ್ಲಿ ಸಿಕ್ಕ ಕೆಲವು ತುಂಬಾ ಹಳೆಯ ಪುರಾವೆಗಳೆಂದರೆ ಭೂಮಿಯಲ್ಲಿ ಹೂಳಲ್ಪಟ್ಟ ಮಾನವನ ಅಸ್ತಿಯ ಕೈ ಮುಷ್ಟಿಗಳಲ್ಲಿ ಮುತ್ತುಗಳು ಕಂಡುಬಂದಿದ್ದವು. ಭೂವಿಜ್ನಾನಿಗಳ ಅಂದಾಜಿನ ಪ್ರಕಾರ ಹೀಗೆ ಮುತ್ತು ಹಿಡಿದುಕೊಂಡಿರುವ ಅಸ್ಥಿ 6000 ವರ್ಷಗಳಷ್ಟು ಹಳೆಯದು ಅಂದರೆ ಸರಿಸುಮಾರು 4000 BC ಇಸವಿಯ ಕಾಲದಲ್ಲೆ ಮುತ್ತುಗಳ ಬಳಕೆ ಇತ್ತು. ನಿಟ್ಟಿನಲ್ಲಿ ಅಧ್ಯಯನ ನಡೆಸಿದ ಭೂವಿಜ್ನಾನಿಗಳ ತಂಡಕ್ಕೆ ಇನ್ನೂ ಸಾಕಷ್ಟು ಪುರಾವೆಗಳು ದೊರೆತು ಮೇಸಪೋಟೊಮಿಯನ್ ನಾಗರೀಕತೆಯ ಕಾಲದಲ್ಲೇ ಮುತ್ತುಗಳ ವಾಣಿಜ್ಯ ವಹಿವಾಟು ನಡೆಯುತ್ತಿತ್ತು ಎಂದು ಭೂವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ.
ಪರ್ಷಿಯನ್ ಗಲ್ಫ್ ಪುರಾತನ ಕಾಲದಲ್ಲಿ ಮುತ್ತುಗಳ ಆಕರವಾಗಿತ್ತು. ಪರ್ಶಿಯನ್ ಗಲ್ಫ್ ಪ್ರಾಂತ್ಯದ ಹೆಚ್ಚಿನ ಪ್ರದೇಶಗಳಲ್ಲಿ ಮಾನವ ವಾಸ ಯೋಗ್ಯ ವಾತಾವರಣ ಬಹಳ ಕಡಿಮೆ. ನೀರು, ಫಲವತ್ತಾದ ಭೂಮಿ ಇಲ್ಲದ ವಿಪರೀತ ತಾಪಮಾನದ ಪ್ರದೇಶಗಳಲ್ಲಿ ಕೂಡ ಜನರು ವಾಸವಾಗಿದ್ದರು. ಇದಕ್ಕೆ ಕಾರಣ ಅಲ್ಲಿ ಹೇರಳವಾಗಿ ಸಿಗುತ್ತಿದ್ದ ಮುತ್ತು ಎಂದು ಭೂವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ. ಕತಾರ್ ಜುಬಾರಾಹ್ ಎಂಬ ಪ್ರದೇಶ ಮಾನವ ವಾಸಕ್ಕೆ ಬಹಳವೇ ಪ್ರತಿಕೂಲ ವಾತಾವರಣವಿದ್ದರೂ ಕೂಡ 18ನೇ ಶತಮಾನದ ಕಾಲದಲ್ಲಿ ಬಹಳ ಶ್ರೀಮಂತ ಪಟ್ಟಣವಾಗಿತ್ತು. ಬೇಸಿಗೆಯಲ್ಲಿ 120 ಡಿಗ್ರೀ ಗಳಷ್ಟು ತಾಪಮಾನವಿರುತ್ತಿದ್ದ, ನೀರು ಹಾಗೂ ಮರಗಳೇ ಇಲ್ಲದ ಪ್ರದೇಶದ ತುಂಬಾ ಜನವಾಸ್ತವ್ಯವಿತ್ತು ಹಾಗೂ ಪಟ್ಟಣ ಗಲ್ಫ್ ಮುತ್ತುಗಳ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾಗಿತ್ತು. ಇತ್ತೀಚೆಗೆ ಭೂವಿಜ್ನಾನಿಗಳು ಕುವೈತ್ ನಿಂದ ಒಮನ್ ಉದ್ದಕ್ಕೂ ನಡೆಸಿದ ಭೂಶೋಧಗಳಲ್ಲಿ ಪುರಾತನ ಕಾಲದಲ್ಲಿ ಪ್ರದೇಶಗಳಲ್ಲಿ ಸಿಗುತ್ತಿದ್ದ ಮುತ್ತುಗಳು, ನಡೆಯುತ್ತಿದ್ದ ಮುತ್ತುಗಳ ವಹಿವಾಟು, ಸಮುದ್ರಗಳಿಂದ ಮುತ್ತುಗಳ ಸಂಗ್ರಹ, ಇವೆಲ್ಲವುಗಳ ಬಗ್ಗೆ ಪುರಾವೆಗಳು ಸಿಗುತ್ತಿವೆ. ಇಂಥ ವಾಸಯೋಗ್ಯವಲ್ಲದ ಪ್ರದೇಶಗಳಲ್ಲೂ ಕೂಡ ಮಾನವ ನಾಗರೀಕತೆ ಬೆಳೆದು ಬಂದಿರುವುದಕ್ಕೆ ಹಾಗೂ ಅಲ್ಲಿನ ಪುರಾತನ ಶ್ರೀಮಂತ ಪಟ್ಟಣಗಳನ್ನು ರೂಪಿಸುವಲ್ಲಿ ಕಾಲದಲ್ಲಿ ಅಲ್ಲಿ ಹೇರಳವಾಗಿ ಸಿಗುತ್ತಿದ್ದ ಮುತ್ತುಗಳೂ ಸಹ ಒಂದು ಬಲವಾದ ಕಾರಣ ಎಂದು ಯೂನಿವರ್ಸಿಟೀ ಕಾಲೇಜ್ ಲಂಡನ್ ಭೂವಿಜ್ನಾನಿಯಾದ ರಾಬರ್ಟ್ ಕಾರ್ಟರ್ ಅಭಿಪ್ರಾಯಪಡುತ್ತಾರೆ.
19 ನೇ ಶತಕದ ಮಧ್ಯದಲ್ಲಿ ಪ್ರದೇಶಗಳಲ್ಲಿನ ಮುತ್ತುಗಳ ವಹಿವಾಟು ಕ್ಷೀಣಿಸಿದರೂ ಕಚ್ಚಾ ತೈಲಗಳ ವಹಿವಾಟು ಗಲ್ಫ್ ರಾಷ್ಟ್ರಗಳಿಗೆ ಮುತ್ತಿನಷ್ಟೇ ಮೌಲ್ಯಯುತವಾದ ನಿಧಿಯನೊದಗಿಸಿತು

ದಿಕ್ಸೂಚಿ,  ಜೂನ್  2012 

No comments:

Post a Comment