Wednesday, April 3, 2013

ಮೊಡರ್ನ್ ಆರ್ಟ್ ಅಥವಾ ಆಧುನಿಕ ಕಲಾಕೃತಿಯೊಳಗೊಂದು ಇಣುಕು ನೋಟ


"ಒಂದು ಆಧುನಿಕ ಕಲಾಕೃತಿಯನ್ನು ನೋಡಿದಾಗ ತಕ್ಷಣ ನಮಗನಿಸುವುದು ಇದೇನು ಕ್ಯಾನ್ವಾಸ್ ನ ಮೇಲೆ ಬೇಕಾಬಿಟ್ಟಿ ಬಣ್ಣ ಚೆಲ್ಲಿರುವರೇನೋ ಎಂದು. ಆದರೆ ಅದೇ ಚಿತ್ರವನ್ನು ಗಹನವಾಗಿ ನೋಡಿದಾಗ ಕಲಾಕಾರನ ಉದ್ದೇಶವನ್ನು ವಿಮರ್ಶಿಸತೊಡಗಿದರೆ ಅದೇ ಕಲಾಕೃತಿಯಲ್ಲಿ ಹಲವು ಅರ್ಥಗಳು ತೆರೆದುಕೊಳ್ಳಲಾರಂಭಿಸುತ್ತವೆ. ಆ ಕಲಾಕೃತಿಯಲ್ಲಿನ ಅಸ್ಪಷ್ಟ ಆಕಾರಗಳು ನಮ್ಮ ಮಿದುಳಿನಲ್ಲಿ ಮೂಡುತ್ತ ಆ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾ ನಮ್ಮ ಭಾವನೆಗೆ ಸ್ಪಂದಿಸತೊಡಗುತ್ತದೆ". ಹೀಗನ್ನುತ್ತಾರೆ ಬ್ರಿಟನ್ ನ ಕಾರ್ಡಿಫ್ ಯೂನಿವರ್ಸಿಟಿಯ ಕಲಾಕಾರ ರಾಬರ್ಟ್ ಪಪ್ಪೆರೇಲ್.  ಈ ಆಧುನಿಕ ಕಲಾಕೃತಿಯನ್ನು ಅದರಲ್ಲಿಯೂ ನಮ್ಮ ಮೆದುಳು ಹೇಗೆ ಅರ್ಥೈಸಿಕೊಳ್ಳುತ್ತದೆ ಎಂಬುದರ ಬಗ್ಗೆ ಅವರು ಯೂನಿವರ್ಸಿಟೀ ಆಫ್ ಜುರಿಚ್ ನ ಆಲುಮೀಟ್ ಇಶೈ ಅವರೊಂದಿಗೆ ಅಧ್ಯಯನ ನಡೆಸುತ್ತಿದ್ದಾರೆ.  ಸಾಮಾನ್ಯವಾಗಿ ಚಿತ್ರಕಲೆಗಳಲ್ಲಿ ಕಾಣುತ್ತಿದ್ದುದು ನಮ್ಮ ಸುತ್ತಲೂ ಕಾಣಸಿಗುವ ವಸ್ತುಗಳು, ವ್ಯಕ್ತಿಗಳು ಅಥವಾ ನಿಸರ್ಗ ಚಿತ್ರಗಳು ಅಥವಾ ಪ್ರಾಣಿಗಳ ಚಿತ್ರ ಸಾಮಾನ್ಯವೆನಿಸುತ್ತದೆ. ಆದರೆ ಈ ಮೊಡರ್ನ್ ಆರ್ಟ್ ಎನ್ನುವುದು ಆ ಚಿತ್ರವನ್ನು ನೋಡಿದಾಗ ನಮ್ಮೊಳಗೆ ಒಂದು ಸನ್ನಿವೇಶದ ಕಲ್ಪನೆಯನ್ನೋ ಅಥವಾ ಯಾವುದೋ ಒಂದು ವಿಶಿಷ್ಟ ಪರಿಸರಕ್ಕೆ ನಮ್ಮನ್ನು ಕರೆದೊಯ್ದಂತೆ ಯಾವುದೋ ಒಂದು ಭಾವನೆಯನ್ನು ಮೂಡಿಸುತ್ತವೆ ಎನ್ನುತ್ತಾರೆ ಪೆಪ್ಪೆರೇಲ್.
ಆಧುನಿಕ ಕಲಾಕೃತಿ ಎಂದರೇನು ಎಂಬುದಕ್ಕೆ ವ್ಯಾಖ್ಯಾನ ಕೊಡುವುದು ಕಷ್ಟವಾದರೂ 1860 ರಿಂದ 1940 ರ ನಡುವಿನ ಅವಧಿಯಲ್ಲಿ ಚಿತ್ರಕಲೆಯಲ್ಲಿ ವಿಭಿನ್ನ ಪ್ರಯೋಗಗಳು ನಡೆದು ಚಿತ್ರಕಲೆಯ ಕ್ರಾಂತಿಗೆ ಕಾರಣವಾಗಿ ಅಲ್ಲಿಂದ ಮುಂದೆ ಶುರುವಾದ ವಿನೂತನ ಚಿತ್ರಕಲಾ ಶೈಲಿ ಮಾಡ್ರನ್ ಆರ್ಟ್ ಎಂದು ಹೆಸರು ಪಡೆದುಕೊಂಡಿತು ಎನ್ನಬಹುದು. ಸಾಮಾಜಿಕ ಹಾಗೂ ನೈಸರ್ಗಿಕ ಜೀವನ ಚಿತ್ರಣವನ್ನು ಚಿತ್ರಪಟಕ್ಕಿಳಿಸುವ ಪ್ರಯೋಗ ಕಲಾ ಪ್ರಪಂಚದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ವಿವಿಧ ರೋಚಕ ಬಣ್ಣಗಳ ಮಿಶ್ರಣದಿಂದ ರಚಿಸಲ್ಪಟ್ಟ, ಕಥೆ ಹೇಳುವ ಚಿತ್ರಗಳು ಚಿತ್ರಕಲಾ ಜಗತ್ತಿಗೆ ಒಂದು ಹೊಸ ಅಧ್ಯಾಯ ಶುರು ಮಾಡಿದವು. ಒಂದು ಚಿತ್ರವನ್ನು ನೋಡಿದಾಗ  ವೀಕ್ಷಕನಲ್ಲಿ ಏನೋ ಒಂದು ಹೊಸ ಅನುಭವ ಕೊಡುವ ವೀಕ್ಷಕನ ಮನದಲ್ಲಿ ಏನೋ ಒಂದು ಲಹರಿ ಮೂಡಿಸುವ ಪ್ರಭಾವಿ ಚಿತ್ರಕಲೆಗಳು ಚಿತ್ರಕಲಾ ರಂಗವನ್ನು ಒಂದು ಉದ್ಯಮವಾಗಿಸುವುವಲ್ಲಿ ಯಶಸ್ವಿಯಾದವು. ವಿಶ್ವ ವಿಖ್ಯಾತ ಕಲಾಕಾರರಾದ ವಿನ್ಸೆಂಟ್ ವ್ಯಾನ್ ಗೋಹ್, ಪಾಲ್ ಸೆಜನ್ನೇ, ಪಾಲ್ ಗೌಗಿನ್, ಜಾರ್ಜ್ ಸ್ಯೂರಟ್, ಹೆನ್ರಿ ಡೇ, ಮುಂತಾದವರು ಮಾಡರ್ನ್ ಆರ್ಟ್ ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಬೆಳೆದು ಬಂದ ಮೊಡರ್ನ್ ಆರ್ಟ್ ನಲ್ಲಿ ವಿವಿಧ ಉಪ ಪ್ರಾಕಾರಗಳೂ ಶುರುವಾದವು.
ಮಾಡ್ರನ್ ಆರ್ಟ್ ನ ಕೆಲವು ಉಪ ಪ್ರಕಾರಗಳು
1)   ಎಕ್ಷ್ಪ್ರೆಸ್ಸನಿಸಮ್ (Expressionism) – ಈ ಪ್ರಕಾರದ ಚಿತ್ರಕಲೆಯು ಕಲಾಕಾರನ ಮಾನಸಿಕ ಹಾಗೂ ಭಾವನಾತ್ಮಕ ಅಭಿವ್ಯಕ್ತಿ ಚಿತ್ರಣವನ್ನು ತೋರಿಸುತ್ತವೆ. 20 ನೇ ಶತಮಾನದ ಪ್ರಾರಂಭದಲ್ಲಿ ಕೆಲವು ಜರ್ಮನ್ ಕಲಾಕಾರರಿಂದ ಹೆಚ್ಚು  ಬೆಳವಣಿಗೆ ಹೊಂದಿದ ಈ ಚಿತ್ರಕಲಾ ಪ್ರಕಾರದಲ್ಲಿ ಗಾಢವಾದ ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಕಲಾಪ್ರಕಾರದ ಪ್ರಮುಖ ಚಿತ್ರಕಾರರೆಂದರೆ ಡಚ್ ಪೇಂಟರ್ ವಿನ್ಸೆಂಟ್ ವ್ಯಾನ್ ಗೋಹ್, ಪಾಬ್ಲೊ ಪಿಕ್ಕಾಸ್ಸೊ,  ಜೇಮ್ಸ್ ಎನ್ಸೊರ್, ಎಡ್ವರ್ಡ್ ಮುಂಚ್, ಪಾಲ್ ಗೌಗಿನ್, ಮುಂತಾದವರು



2)   ಇಂಪ್ರೆಸ್ಶನಿಸಮ್ (Impressionism) – ಕ್ಲಾಡ್ ಮಾನೆಟ್ ಎನ್ನುವ ಚಿತ್ರಕಾರನ ಒಂದು ಚಿತ್ರ ಇಂಪ್ರೆಸ್ಸನ್ : ಸನ್ ರೈಸ್ ಆಫ್ 1872 – ಎನ್ನುವ  ಚಿತ್ರದಿಂದ ಈ ಪ್ರಕಾರಕ್ಕೆ ಇಂಪ್ರೆಸ್ಸನಿಸ್ಮ್ ಎನ್ನುವ ಹೆಸರು ಬಂತು. ನೈಜತೆ ಗೆ ಹೆಚ್ಚು ಒತ್ತುಕೊಟ್ಟ ಈ ಪ್ರಕಾರದ ಚಿತ್ರಕಲೆಯಲ್ಲಿ ಬಣ್ಣ ಹಾಗೂ ಬೆಳಕುಗಳ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯ ಕೊಡಲಾಗುತ್ತದೆ. ಈ ಪ್ರಕಾರದ ಚಿತ್ರಲೆಗೆ ಗಣನೀಯ ಕೊಡುಗೆ ನೀಡಿದ ಕೆಲವು ಕಲಾಕಾರರೆಂದರೆ ಪಾಲ್ ಸೆಜನ್ನೇ, ಎಡ್ಗರ್ ಡೆಗಾಸ್, ಎಡೌಯಾರ್ಡ್ ಮಾನೆಟ್, ಕ್ಲಾಡ್ ಮಾನೆಟ್, ಪಿಯರ್ರೆ ಆಗಸ್ಟೇ ರೇನೋಯಿರ್.

3)   ಫೋರ್ಮಲಿಸಮ್ (Formalism) – ಈ ಪ್ರಕಾರದಲ್ಲಿ ವಿವಿಧ ಆಕಾರ, ರೂಪ, ಬಣ್ಣಗಳ ಶಿಶ್ತುಬದ್ದ ಬಳಕೆಗೆ ಅಂದರೆ ಎಂದಿನಿಂದಲೂ ಚಿತ್ರಕಲೆಯಲ್ಲಿ ಚಾಲ್ತಿಯಲ್ಲಿದ್ದ ಪದ್ದತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ.   

4)  ಕ್ಯೂಬಿಸಮ್ (Cubism) – ವಿಶ್ವ ವಿಖ್ಯಾತ ಚಿತ್ರಕಾರ ಪಾಬ್ಲೋ ಪಿಕ್ಕಾಸ್ಸೊ ಹಾಗೂ ಜಾರ್ಜ್ ಬ್ರ್ಯಾಕ್ ಅವರುಗಳಿಂದ 19 ನೇ ಶತಮಾನದ ಪ್ರಾರಂಭದಲ್ಲಿ ಬೆಳವಣಿಗೆ ಹೊಂದಿದ ಈ ಪ್ರಕಾರದಲ್ಲಿ ಚಿತ್ರವು ಒಡೆದು ಹೋದ ಗ್ಲಾಸ್ ಚೂರುಗಳಿಂದ ಚಿತ್ರಿಸಿದ ಚಿತ್ರದಂತೆ ಭಾಸವಾಗುತ್ತವೆ( A field of broken glass ) ಎಂದು ಪ್ರಮುಖ ಚಿತ್ರಕಲಾ ವಿಮರ್ಶಕರು ವಿಮರ್ಶಿಸುತ್ತಾರೆ. ಈ ಪ್ರಕಾರದ ಇತರ ಪ್ರಮುಖ ಚಿತ್ರಕಾರರು ಫೆಮಂಡ್ ಲೆಗರ್, ಜುಯಾನ್ ಗ್ರಿಸ್, ಜೀನ್ ಮೇಟ್ಜಿಂಗರ್.  
                                                          ಪಿಕಾಸ್ಸೊ

5)   ಸರ್ರೀಯಲಿಸಮ್ (Surrealism) – ಸಿಗ್ಮಂಡ್ ಫ್ರ್ಯುಡ್ (Sigmund Freud) ಅವರ ಸೈಕಲಾಜಿಕಲ್ ತಿಯರೀಸ್ ಗಳಿಂದ ಪ್ರಭಾವಿತಗೊಂಡು ಅದೇ ಆಧಾರದ ಮೇಲೆ ಈ ಕಲಾ ಶೈಲಿಯನ್ನು ಶುರು ಮಾಡಿದ್ದು ಲೇಖಕರಾದ ಆಂಡ್ರೆ ಬ್ರೇಟೋನ್, ಕವಿಗಳಾದ ಲೂಯಿಸ್ ಅರಗಾನ್ ಹಾಗೂ ಪಾಲ್ ಎಲಾರ್ಡ್, ಮಾನವನ ಅಂತರಾತ್ಮದ ಮಜಲುಗಳನ್ನು ತೆರೆದಿಡಲು ಯತ್ನಿಸುವ ಈ ಕಲಾವಿಧಾನ  19ನೇ ಶತಮಾನದ ಪ್ರಾರಂಭದಲ್ಲೇ ಬೆಳವಣಿಗೆ ಹೊಂದಿತು. ಈ ಕಲೆಗೆ ಕೊಡುಗೆ ನೀಡಿದ ಇತರ ಕಲಾಕಾರರೆಂದರೆ ಮ್ಯಾಕ್ಸ್ ಅರ್ನಾಸ್ಟ್, ಅಂಡ್ರೆ ಮಾಶ್ಶನ್, ಮಾನ್ ರೇ, ರೇನೆ ಮಾಗ್ರಿಟ್ಟೆ, ಸಾಲ್ವಡಾರ್ ಡಾಲಿ.

6)   ಅಬ್ಸ್ಟ್ರಾಕ್ಟ್ ಎಕ್ಸ್ಪ್ರೇಸ್ಶನಿಸಮ್ (Abstract Expressionism) – ಈ ಕಲಾಪ್ರಕಾರದ 1940 ರ ಸಮಯದಲ್ಲಿ ಅಮೇರಿಕಾದಲ್ಲಿ ಬೆಳವಣಿಗೆ ಹೊಂದಿತು. ಈ ಶೈಲಿಯಲ್ಲಿ ಮಾನವನ ಭಾವನೆಗಳ ಪ್ರತಿಬಿಂಭಿಸುವ ಚಿತ್ರಗಳೂ ಹಾಗೂ ಜಗದ ನಿತ್ಯ ಸತ್ಯ ತತ್ವಗಳನ್ನು ಚಿತ್ರಗಳಲ್ಲಿ ಮೂಡಿಸುವ ಪ್ರಯತ್ನ ಮಾಡಲಾಯ್ತು. ಈ ಕಲಾಪ್ರಕಾರಕ್ಕೆ ಹೆಚ್ಚಿನ ಕೊಡುಗೆ ನೀಡಿದ ಕಲಾಕಾರರೆಂದರೆ ಜಾಕ್ಸನ್ ಪೊಲ್ಲೋಕ್, ವಿಲಿಯಂ ಡೇ ಕೂನಿಂಗ್, ಫ್ರಾಂಜ್ ಕ್ಲಿನ್.


7)   ಪೋಪ್ ಆರ್ಟ್ (Pop Art) –  1950 ರ ಸುಮಾರಿಗೆ ಬೆಳವಣಿಗೆ ಹೊಂದಿದ ಈ ಕಲಾವಿಧಾನ ಅಲ್ಲಿಯವರೆಗೆ ಚಿತ್ರಕಲೆಯಲ್ಲಿದ್ದ ಗಂಭೀರತೆಯನ್ನು ಸ್ವಲ್ಪ ಸಡಿಲಗೊಳಿಸಿತು. ಸಿನೆಮಾ ತಾರೆಯರು, ಕಾಮಿಕ್ ಪಾತ್ರಗಳನ್ನು, ಫೇಮಸ್ ಅಡ್ವರ್ಟಯಿಜಿಂಗ್ ಗಳನ್ನು ಚಿತ್ರಕಲೆಗಿಳಿಸಿತು. ಈ ಕಲಾಪ್ರಕಾರವನ್ನು ಬೆಳೆಸಿದ ಕೆಲವು ಪ್ರಮುಖ ಕಲಾಕಾರರೆಂದರೆ ಜಾಸ್ಪರ್ ಜೋನ್ಸ್, ಆಂಡಿ ಅರ್ಹೊಲ್, ರೊಯ್ ಲಿಟೇನ್ಸ್ಟೆನ್.  


ಚಿತ್ರಕಲಾ ಇತಿಹಾಸದಲ್ಲೇ ಅಲೆ ಎಬ್ಬಿಸಿದ ಕೆಲವು ವಿವಾದಾತ್ಮಕ  ಚಿತ್ರಗಳು
ಚಿತ್ರಕಲೆಯ ಇತಿಹಾಸದಲ್ಲೇ ವಿವಾದಾತ್ಮಕ ಎಂಬ ಗುಂಪಿಗೆ ಸೇರುವ ಕೆಲವು ಪ್ರಸಿದ್ದ ಕಲಾಕಾರರ ಚಿತ್ರಗಳು ಇಂದಿಗೂ ಚಿತ್ರಕಲಾ ಜಗತ್ತಿಗೆ ಒಗಟಾಗಿಯೇ ಗೋಚರಿಸುತ್ತವೆ. ವಿವಾದಾತ್ಮಕವಾದರೂ ಬಹಳ ಪ್ರಸಿದ್ದಿ ಹಾಗೂ ಜನಪ್ರಿಯತೆ ಪಡೆದ ಈ ಚಿತ್ರಗಳು ಕಲಾ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.
1)   20 ನೇ ಶತಮಾನದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದ ಬಲು ಪ್ರಸಿದ್ದಿ ಪಡೆದ ಈ ಚಿತ್ರದ ಹೆಸರು ಫೌಂಟೆನ್’. ಮಾರ್ಕೆಲ್ ಡಚಾಂಪ್ ಎಂಬ ಚಿತ್ರಕಾರನಿಂದ ಚಿತ್ರಿಸಲ್ಪಟ್ಟ ಈ ಚಿತ್ರದಲ್ಲಿರುವುದು ಒಂದು ಮೂತ್ರಾಲಯ. ಚಿತ್ರಿಸಲ್ಪಟ್ಟ ವಸ್ತುವಿನ ಬಗ್ಗೆ ಅತಿಯಾದ ಮಹತ್ವ ನೀಡುತ್ತಿದ್ದ, ತನ್ನದೇ ಆದ ಶಿಸ್ತುಕ್ರಮ, ನಿಯಮ ಹೊಂದಿದ್ದ ಚಿತ್ರಕಲೆಯ ಇತಿಹಾಸ ಈ ಮೂತ್ರಾಲಯದ ಚಿತ್ರದಿಂದ ಬೆಚ್ಚಿ ಬಿದ್ದಿತ್ತು. ಚಿತ್ರಕಲಾ ಜಗತ್ತಿಗೆ ಒಗಟಂತೆ ಕಾಡಿದ ಈ ಚಿತ್ರ ಕಲಾಜಗತ್ತಿಗೆ ಒಂದು ಮೈಲಿಗಲ್ಲು.
2)   ಡಾಮಿಯನ್ ಹರ್ಶ್ಟ್ ಎಂಬ ಚಿತ್ರಕಾರರ ದ ಫಿಸಿಕಲ್ ಇಂಪೋಸಿಬಿಲಿಟಿ ಆಫ್ ಡೆತ್ ಇನ್ ದ ಮೈಂಡ್ ಆಫ್ ಸಮ್ ಒನ್ ಲಿವಿಂಗ್ಎನ್ನುವ ಚಿತ್ರ ಎಲ್ಲ ದಾಖಲೆಗಳನ್ನೂ ಮೀರಿ ಅತೀ ಹೆಚ್ಚು ಬೆಲೆಗೆ ಮಾರಾಟವಾಯ್ತು. ಈ ಚಿತ್ರದಲ್ಲಿ ಚಿತ್ರಿಸಲ್ಪಟ್ಟಿದ್ದು ಒಂದು ಗ್ಲಾಸ್ ಟ್ಯಾಂಕ್ ನೊಳಗಿನ 13 ಕಾಲುಗಳ ಟೈಗರ್ ಷಾರ್ಕ್. ಚಿತ್ರಿಸಲ್ಪಡುವ ವಸ್ತು ಅಥವಾ ವಿಷಯದ ಬಗೆಗೆ ಒಂದು ಶಿಸ್ತು ಬದ್ದ ನಿಯಮ ಹೊಂದಿದ್ದ ಚಿತ್ರಕಲಾ ರಂಗ ಎಲ್ಲ ಮೀರಿ ನಿಯಮಗಳನ್ನೂ ಮೀರಿ ಚಿತ್ರಿಸಲ್ಪಟ್ಟ ಈ ಚಿತ್ರದ ಬಗ್ಗೆ ವಿವಾದ ಎಬ್ಬಿಸಿತ್ತು.
3)   ಪಾಬ್ಲೊ ಪಿಕಾಸ್ಸೊ ಅವರ ಲೆಸ್ ಡೆಮೊಯೆಸ್ಸೆಲ್ಸ ಡಿ ಅವಿಗ್ನೋನ್ಎನ್ನುವ ಹೆಸರಿನ ಚಿತ್ರದಲ್ಲಿ ಬಣ್ಣಗಳ ಅಸಹಜ ಬಳಕೆ ಹಾಗೂ ಕೃತಕತೆ ಯನ್ನು ಪ್ರತಿನಿಧಿಸುವಂತಿದ್ದ ಈ ಚಿತ್ರ ಚಿತ್ರವಿಮರ್ಶಕರನ್ನು ಆಶ್ಚರ್ಯಗೊಳಿಸಿತ್ತು.
4)  ಗ್ಲುಸ್ತವ್ ಕ್ಲಿಮ್ಟ ಎನ್ನುವ ಚಿತ್ರಕಾರನ ದ ಪೊರ್ಟೈಟ್ ಆಫ್ ಅಡಿಲೆ ಬ್ಲೋಚ್ ಬ್ಯೂರ್ಎಂಬ ಚಿತ್ರ ಆ ಚಿತ್ರದಲ್ಲಿನ ವಿವಾದಾತ್ಮಕ ವ್ಯಕ್ತಿ ಹಾಗೂ ಆ ಪೈಂಟಿಂಗ್ ನಲ್ಲಿನ ವಿನೂತನ ಶೈಲಿಯಿಂದಾಗಿ ಜನಪ್ರಿಯತೆಯ ಜೊತೆಗೆ ವಿವಾದವನ್ನೂ ಸೃಷ್ಟಿಸಿತು.
5)   ಟಕಾಶಿ ಮುರಾಕಾಮಿ ಎಂಬ ಚಿತ್ರಕಾರನ ಹೀರೋಪೋನ್ ಫ್ಯಾಕ್ಟರೀಎಂಬ ಚಿತ್ರ ರಚನೆಯಲ್ಲಿನ ವಿಭಿನ್ನ ಹೊಸ ಪ್ರಯೋಗದಿಂದಾಗಿ ಚಿತ್ರಕಲಾ ರಂಗದ ವಿಮರ್ಶಕರ ಹುಬ್ಬೇರಿಸಿತ್ತು.

ಭಾರತದಲ್ಲಿ ಮೊಡರ್ನ್ ಆರ್ಟ್ ನ ಬೆಳವಣಿಗೆ .
ಭಾರತದಲ್ಲಿ ಮೊಡರ್ನ್ ಆರ್ಟ್ ನ ಮೇಲೆ ಪಾಶ್ಚಿಮಾತ್ಯ ಚಿತ್ರಕಲೆಯ ಗಾಢ ಪ್ರಭಾವವಿರುವುದಕ್ಕೆ ಕಾರಣ ಭಾರತದಲ್ಲಿ ದಶಕಗಳ ಕಾಲ ನಡೆದ ಬ್ರಿಟಿಷ್ ಆಡಳಿತ. ಬ್ರಿಟಿಷರ ಆಡಳಿತದ ಕಾಲದಲ್ಲಿ ಅವರು ಪರಿಚಯಿಸಿದ ಹಾಗೂ ಚಿತ್ರಕಲಾ ಶಾಲೆಗಳಲ್ಲಿ ಕಲಿಸಲ್ಪಡುತ್ತಿದ್ದ ಕೆಲವು ಪಾಶ್ಚಿಮಾತ್ಯ ಚಿತ್ರಕಲಾ ಶೈಲಿ ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಸ್ವಾತಂತ್ರ್ಯಾ ನಂತರ ಹಲವು ಪ್ರತಿಭಾವಂತ ಕಲಾವಿದರು ಕಲಾಮಾಧ್ಯಮದಲ್ಲಿ ಭಾರತೀಯತೆಯನ್ನು ಪ್ರತಿಬಿಂಬಿಸುವಲ್ಲಿ ಸಫಲರಾದರು. ರವೀಂದ್ರನಾಥ್ ಠಾಗೋರ್ ಅವರ ಶಾಂತಿನಿಕೇತನದಲ್ಲಿ ಚಿತ್ರಕಲೆಯ ಅಭ್ಯಾಸ ನಡೆಸಿದ ಕೆ.ಜಿ ಸುಭ್ರಮಣ್ಯಂ ಎಂಬ ಚಿತ್ರಕಾರರು  ಮುಂದೆ ಭಾರತೀಯ ಚಿತ್ರಕಲಾ ರಂಗದಲ್ಲಿ ಭಾರತೀಯ ಸಂಸ್ಕೃತಿ, ಜಾನಪದ ಕಲೆ, ಗ್ರಾಮೀಣ ಜನಜೀವನದ ಚಿತ್ರಣವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂದೆ ಹೊಸ ಪ್ರಯೋಗಗಳ ನೆಪದಲ್ಲಿ ಮತ್ತೆ ಪಾಶ್ಚಾತ್ಯ ಶೈಲಿಯೆಡೆಗೇ ವಾಲಿದ ಭಾರತದ ಆಧುನಿಕ ಚಿತ್ರಕಲೆ ಪ್ರಭುದ್ದತೆ ಪಡೆಯುತ್ತಾ ತನ್ನದೇ ಸ್ವಂತಿಕೆಯನ್ನು ರೂಪಿಸಿಕೊಂಡಿತು. ಹಲವು ಹೆಸರಾಂತ ಚಿತ್ರಕಾರರಾದ  ಭೂಪೆನ್ ಕಕ್ಕರ್, ಪರಿತೋಶ್ ಸೇನ್, ಕೃಶೇನ್ ಖನ್ನಾ, ವಿಕಾಸ್ ಬಟ್ಟಾಚಾರ್ಯ, ಧರ್ಮನಾರಾಯಣ ದಾಸ್ ಗುಪ್ತಾ, ಸುನಿಲ್ ದಾಸ್, ಸುಧೀರ್ ಪಟವರ್ಧನ್, ಶ್ಯಾಮಲ್ ದತ್ತ ರೊಯ್, ಘುಲಾಮ್ ಮಹಮ್ಮದ್ ಶೇಕ್, .ಜಿ. ರಾಮಚಂದ್ರನ್, ಶುವಪ್ರಸನ್ನ, ಸಜಲ್ ರೊಯ್, ಜೈ ಜರೊತಿಯ, ಅತುಲ್ ದೊಡಿಯಾ, ಜಯದೀಪ್ ಮೇಹ್ರೋತ್ರಾ ಮುಂತಾದ ಚಿತ್ರಕಾರರು ಹಲವು ಹೊಸ ಪ್ರಯೋಗಗಳ ಜೊತೆಗೆ ಇಂಟರ್ ಪ್ರಿಟೇಟಿವ್ ರಿಯಲಿಸಂ ಕಲಾ ಶೈಲಿಯ ಬೆಳವಣಿಗೆಗೆ ಕೊಡುಗೆ ನೀಡಿದರು.
ಭಾರತೀಯ ಚಿತ್ರಕಲಾ ರಂಗದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಚಿತ್ರಕಾರ ಎಮ್ ಎಫ್ ಹುಸೈನ್. “ಭಾರತದ ಪಿಕಾಸೂಎಂಬ ಪ್ರಖ್ಯಾತಿ ಪಡೆದಿದ್ದ ಎಂ ಎಫ್ ಹುಸೈನ್ ಭಾರತೀಯ ಚಿತ್ರಕಲೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದರು. ಆದರೆ ಮುಂದೆ ವಿವಾದಾತ್ಮಕ ಚಿತ್ರಕಾರನೆಂದು ಹೆಸರು ಪಡೆದ ಎಂ ಎಫ್ ಹುಸೈನ್ ಭಾರತದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತ ಕೆಲವು ಚಿತ್ರಗಳನ್ನು ಬರೆದು ಇಡೀ ದೇಶದ ಕೆಂಗಣ್ಣಿಗೆ ಗುರಿಯಾದರು. ಜನರ ವಿರೋಧದ ನಡುವೆಯೂ ಇಂಥ ವಿವಾದಾತ್ಮಕ ಚಿತ್ರಗಳನ್ನು ಬರೆಯುವುದನ್ನು ಬಿಡದ ಹುಸೈನ್ ಮತ್ತೆ ಇದೇ ರೀತಿಯ ಪ್ರಯೋಗಗಳನ್ನು ಮುಂದುವರೆಸಿದರು. ಹಿಂದೂ ದೇವತೆಗಳಾದ ಲಕ್ಷ್ಮಿ,  ಸರಸ್ವತಿ, ಪಾರ್ವತಿಯರ ನಗ್ನ ಚಿತ್ರಗಳನ್ನು ಬರೆದಾಗ ದೇಶದಾದ್ಯಂತ ಕಟು ಟೀಕೆಗೆ ಗುರಿಯಾಗಿದ್ದೆ ಅಲ್ಲದೆ ಕೆಲವು ಧಾರ್ಮಿಕ ಸಂಘಗಳು ಜೀವ ಬೆದರಿಕೆಯನ್ನು ಕೂಡ ಹಾಕಿದವು. ಅಷ್ಟಾಗಿಯೂ ಜನರ ಭಾವನೆಗಳಿಗೆ ಏಟಾಗುವಂತ ಚಿತ್ರಗಳನ್ನು ಬರೆಯುವುದನ್ನು ಮುಂದುವರೆಸಿದ ಹುಸೈನ್ ನಗ್ನ ಭರತಾಂಬೆಯ ಚಿತ್ರ ಬರೆದು ಮತ್ತೆ ಟೀಕೆಗೆ ಗುರಿಯಾದರು. ಅವರ ಇನ್ನೊಂದು ಚಿತ್ರದಲ್ಲಿ ಸಂಪೂರ್ಣ ಪೋಷಾಕು ಧರಿಸಿದ ಮುಸ್ಲಿಂ ದೊರೆಯೊಂದಿಗೆ ನಗ್ನ ಬ್ರಾಹ್ಮಣನ ಚಿತ್ರ ಬರೆದು ತೀವ್ರ ಟೀಕೆಗೆ ಒಳಗಾಗಿದ್ದೆ ಅಲ್ಲದೆ ಅವರ ಜೀವಕ್ಕೆ ಅಪಾಯ ಒದಗುವ ಪರಿಸ್ಥಿತಿ ನಿರ್ಮಾಣವಾಗಿ ದೇಶ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂತು

ದಿಕ್ಸೂಚಿ, ಆಗಸ್ಟ್ 1012

No comments:

Post a Comment