Wednesday, April 3, 2013

ಹೆಣ್ಣಿನ ಹೋರಾಟಕ್ಕೆ ಕೊನೆ ಎಂದು ? ..

20 ಶತಮಾನಗಳಿಂದ ಬೆಳೆದುಬರುತ್ತಿರುವ ನಾಗರೀಕತೆ ಮನುಷ್ಯನನ್ನು ಸಾಣೆ ಹಿಡಿದು ಪರಿಪಕ್ವಗೊಳಿಸುವ ಬದಲು ಅಮಾನವೀಯತೆಯನ್ನು, ಕೃತಕತೆಯನ್ನು ತುಂಬುತ್ತಾ ಯಾವ ದಿಕ್ಕಿಗೆ ಸಾಗಿದೆ ಜಗತ್ತು ಎಂದು ಬೆಚ್ಚಿ ಬೀಳಿಸುವಂತ ಘಟನೆ ದೆಹಲಿಯ ಯುವತಿಯ ಮೇಲೆ ನಡೆದ ಸರಣಿ ಅತ್ಯಾಚಾರ. ಮಾನಸಿಕ ಹಾಗೂ ಬೌದ್ದಿಕ ಮಟ್ಟದಲ್ಲಿ ಗಂಡಿಗಿಂತ ಒಂದಿನಿತೂ ಕಡಿಮೆ ಇಲ್ಲ ಎಂಬುದನ್ನು ಹೆಣ್ಣು ಈಗಾಗಲೇ ಸಾಬೀತು ಪಡಿಸಿದರೂ ರಟ್ಟೆ ಬಲದಲ್ಲಿ ಕೊಂಚ ಕಡಿಮೆಯಾಗಿರುವುದೇ ಹೆಣ್ಣಿಗೆ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ತಂದೊಡ್ಡುತ್ತಿರುವುದು ನಾಗರೀಕತೆಯ ದೊಡ್ಡ ದುರಂತ. ಎಲ್ಲ ವೈರುಧ್ಯಗಳನ್ನು, ಪ್ರತಿಕೂಲತೆಯನ್ನು ಮೀರಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದೆ ಹೆಣ್ಣಿನ ಈವರೆಗಿನ ಬಹುದೊಡ್ಡ ಸಾಧನೆ ಎಂಬುದು ಹೆಮ್ಮೆ ಪಾಡಬೇಕಾದ ವಿಷಯವೋ ಅಥವಾ ಬೇಸರ ಪಡಬೇಕಾದ ವಿಷಯವೋ ಎಂಬ ಗೊಂದಲ ಕಾಡುತ್ತದೆ ಕೆಲವೊಮ್ಮೆ. ಯಾಕೆಂದರೆ ಹೆಣ್ಣು ತನ್ನ ಕನಿಷ್ಠ ಮೂಲಭೂತ ಹಕ್ಕುಗಳಿಗಾಗಿ, ರಕ್ಷಣೆಗಾಗಿ ಹೋರಾಟ ಮಾಡಿ ಪಡೆದುಕೊಳ್ಳಬೇಕಾದುದು ನಾಗರೀಕತೆಗೆ, ಸಮಾಜಕ್ಕೆ ಶೋಭೆ ತರುವಂತಹ ವಿಷಯವಂತೂ ಖಂಡಿತ ಅಲ್ಲ. ಆದರೆ ಹೆಣ್ಣಿನ ಹೋರಾಟಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಈವರೆಗೂ ಪ್ರಶ್ನೆಯಾಗೇ ಉಳಿದಿದೆ. ಈ ಎಲ್ಲ ಗೊಂದಲಗಳ ನಡುವೆ ಸ್ವಲ್ಪ ಸಮಾಧಾನ ಕೊಡುವ ಸಂಗತಿಯೆಂದರೆ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಬದಲಾಗುತ್ತಿರುವುದು. ಈಗ ಮೊನ್ನೆ ಮೊನ್ನೆಯವರೆಗೂ ಅಡಿಗೆ ಮನೆಗಷ್ಟೇ ಸೀಮಿತವಾಗಿದ್ದ ಹೆಣ್ಣಿನ ಬದುಕು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ  ತೆರೆದುಕೊಳ್ಳುತ್ತಿದೆ. ಬೇರೆ ಬೇರೆ ಉದ್ಯೋಗ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲೆವು ಎಂಬುದನ್ನೂ ಮಹಿಳೆಯರು ಸಾಬೀತುಪಡಿಸಿದ್ದಾರೆ. ಈ ಬದಲಾವಣೆ ಒಂದೇ ಸಲಕ್ಕೆ ಕ್ಷಿಪ್ರವಾಗಿ ಆಗಿಹೋಗದಿದ್ದರೂ ನಿಧಾನವಾಗಿಯಾದರೂ ಸ್ಥಿರಗತಿಯಲ್ಲಿ ನಡೆಯುತ್ತಿದೆ. ಸಮಾಜದಲ್ಲಿ ಹೆಣ್ಣಿನ ಬಗೆಗಿನ ಧೋರಣೆ ಬದಲಾಗುತ್ತಿದೆ. 90ರ ದಶಕದಲ್ಲಿ ಮಹಿಳೆಯರಿಗಿದ್ದ ಪರಿಸ್ತಿತಿ ಇಂದಿನ ಮಹಿಳೆಗಿಲ್ಲ. ಅಂದಿಗಿಂತ ಇಂದು ಮಹಿಳೆಯರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆಗಳಾಗಿವೆ. ಅಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಂದು ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳು ಸಿಕ್ಕಿವೆ. ಒಟ್ಟಿನಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಈ ಬದಲಾವಣೆ ಸಮಾಧಾನ ಕೊಟ್ಟರೂ ಮಹಿಳೆಯರ ಮೇಲಿನ ದೈಹಿಕ ಶೋಷಣೆ ಹಾಗೂ ಮಾನಸಿಕ ಶೋಷಣೆ ಇನ್ನೂ ಮುಂದುವರೆಯುತ್ತಲೇ ಇರುವುದು ಕೂಡ ನಿಜ. ಸೂಕ್ಷ್ಮ ಸಂವೇದಿ ಮಹಿಳೆ ಮಾನಸಿಕವಾಗಿಯೂ ಆರ್ಥಿಕವಾಗಿಯೂ ಪ್ರಬಲವಾದಾಗಲೇ ಈ ಬದಲಾವಣೆಗೆ ಒಂದು ಅರ್ಥ ಬರುವುದು. ಆದರೆ ಇನ್ನೂ ದಿಗಿಲು ಮೂಡಿಸುವ ಪ್ರಶ್ನೆಯೆಂದರೆ ಮಹಿಳೆಯರ ಮೇಲಿನ ದೈಹಿಕ ಹಾಗೂ ಲೈಂಗಿಕ ಹಿಂಸಾಚಾರಕ್ಕೆ ಕೊನೆ ಯಾವಾಗ ಎಂಬುದು. ಜಗತ್ತಿನ ಎಲ್ಲಾ ಕಡೆಗಳಲ್ಲೂ ಮಹಿಳೆಯರು ಈ ಹಿಂಸೆಗೆ ಒಳಪಡುತ್ತಿದ್ದಾರೆ. ಪ್ರಗತಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಕೂಡ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ತಪ್ಪಿಲ್ಲವಾದರೂ ಪ್ರಗತಿಪರ ರಾಷ್ಟ್ರಗಳಲ್ಲಿ ಇರುವ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಎನ್ನಬಹುದು. ನಮ್ಮ ಉತ್ತರ ಭಾರತದಲ್ಲಂತೂ ಈ ಅಪರಾಧ ತೀರ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ದುರದೃಷ್ಟಕರ. ಹೆಣ್ಣಿನ ಆತ್ಮವಿಶ್ವಾಸವನ್ನು ತೀರಾ ಕುಗ್ಗಿಸಿಬಿಡುವ ಈ ಶೋಷಣೆಯಿಂದ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಪಾಯ ಕಂಡುಕೊಳ್ಳಬೇಕಿದೆ. ಹೆಣ್ಣು ರಟ್ಟೆ ಬಲದಲ್ಲಿ ಸ್ವಲ್ಪ ಕಡಿಮೆಯಾಗಿರುವುದೇ ಮಹಿಳೆಯರ ಮೇಲಿನ ಈ ದೈಹಿಕ ಶೋಷಣೆಗೆ ಕಾರಣವಾದರೆ ಮಹಿಳೆಯರಲ್ಲಿರುವ ಸಂಘಟನಾ ಶಕ್ತಿಯೇ ಈ ಪ್ರಶ್ನೆಗೆ ಉತ್ತರವಾಗಬಲ್ಲದೇನೋ. ಇಂದು ಮಹಿಳೆಯರಿಗೆ ಸಿಗುತ್ತಿರುವ ಸಾಮಾಜಿಕ ಸ್ಥಾನಮಾನಕ್ಕೆ ಹಾಗೂ ಮಹಿಳೆಯರ ಜೀವನದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಛಲ ಬಿಡದ ಮಹಿಳೆಯರ ಹೋರಾಟವೇ ಕಾರಣ. ಅಂದು 1780 ರ ಸಮಯದಲ್ಲಿ ಅಲ್ಲೆಲ್ಲೋ ಫ್ರಾನ್ಸ್ ನಲ್ಲಿ ಶುರುವಾದ ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ಹಾಗೂ ಮತ ಚಲಾಯಿಸುವ ಹಕ್ಕುಬೇಕು” ಎಂಬ ಪ್ರತಿಭಟನೆ ಮೊದಲು ಒಂದು ಸಣ್ಣ ಕಿಡಿಯಿಂದ ಶುರುವಾಗಿ ನಂತರ ಮಹಿಳಾ ಸಂಘಟನೆಗಳ ಮೂಲಕ ಬೃಹತ್ ಚಳುವಳಿಯ ರೂಪ ಪಡೆದುಕೊಂಡು ಮಹಿಳೆಯರ ಜೀವನದಲ್ಲಿ ಬದಲಾವಣೆಯ ಅಲೆ ಏಳುವಂತೆ ಮಾಡಿತು.  ಅಂದು ಅಲ್ಲಿ ಶುರುವಾದ  ಬದಲಾವಣೆಯ ಅಲೆಯಿಂದಾಗಿಯೇ ಇಂದು ಜಗತ್ತಿನಾದ್ಯಂತ ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಸಾಮಾಜಿಕ ಸ್ಥಾನಮಾನ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.   18 ಹಾಗೂ 19 ನೇ ಶತಮಾನದಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಸಂಸಾರ, ಗಂಡ, ಮಕ್ಕಳನ್ನು ತೊರೆದು “ಮಹಿಳೆಯರಿಗೆ ಸಮಾನತೆಯ ಹಕ್ಕು” ಎಂಬ ಈ ಕ್ರಾಂತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟರು.
ಮಹಿಳೆಯರ ಜೀವನದ ಬದಲಾವಣೆಗೆ ಮುನ್ನುಡಿಯಿಟ್ಟ 17 ಮತ್ತು 18 ನೇ ಶತಮಾನದಲ್ಲಿ ಶುರುವಾದ “ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ಹಾಗೂ ಮತ ಚಲಾವಣೆಯ ಹಕ್ಕು ಚಳುವಳಿ.
“ಮಹಿಳೆಯರಿಗೂ ಸಮಾಜದಲ್ಲಿ ಸಮಾನ ಹಕ್ಕು” ಚಳುವಳಿ ಮೊತ್ತ ಮೊದಲು 1780 ಹಾಗೂ 1790 ರ ಸಮಯದಲ್ಲಿ ಫ್ರಾನ್ಸ್ ನಲ್ಲಿ ಶುರುವಾಯಿತು.  ಅಲ್ಲಿಂದ ಮುಂದೆ ಯುರೋಪ್ ನಾದ್ಯಂತ ಶುರುವಾದ ಈ ಚಳುವಳಿಯಲ್ಲಿ ಬರೀ ಮಹಿಳೆಯರೇ ಅಲ್ಲದೆ ಪುರುಷ ವರ್ಗದಲ್ಲಿಯೂ ಕೂಡ ಹಲವಾರು ಜನರ ಹಾಗೂ ಜನನಾಯಕರ ಬೆಂಬಲ ಸಿಕ್ಕಿತ್ತು. ಆಯಾ ದೇಶಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಈ ಚಳುವಳಿ ನಿರಂತರವಾಗಿ ನಡೆಯುತ್ತಲೇ ಇತ್ತು.
ಆನಂತರ ಹೆಚ್ಚಿನ ಮಟ್ಟದಲ್ಲಿ ಶುರುವಾದ ಈ ಚಳುವಳಿಯಿಂದಾಗಿ 1756 ರಲ್ಲಿ ಅಮೆರಿಕಾದ ಲಿಡಿಯಾ ತಾಫ್ಟ್ ಎಂಬ ಮಹಿಳೆ ಕಾನೂನು ಬದ್ದವಾಗಿ ಮತ ಚಲಾವಣೆ ಮಾಡಿದ ಜಗತ್ತಿನ ಮೊತ್ತ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು. ಹಾಗಿದ್ದಾಗ್ಯೂ ಮಹಿಳೆಯರಿಗೆ ಮತ ಚಲಾಯಿಸಲು ಬಹಳಷ್ಟು ನಿಬಂಧನೆಗಳು, ಕಟ್ಟುಪಾಡುಗಳು ಇದ್ದವು. ಮಹಿಳೆ ಮತ ಚಲಾವಣೆಯ ಹಕ್ಕು ಪಡೆಯಲು ಸ್ವಂತ ಆಸ್ತಿ ಹೊಂದಿರಬೇಕು, ಮದುವೆಯಾಗದ ಯುವತಿಯಾಗಿರಬೇಕು ಎಂಬೆಲ್ಲ ಹತ್ತು ಹಲವು ನಿಬಂಧನೆಗಳಿದ್ದವು. ಹಾಗಾಗಿ ಮಹಿಳೆಯರಿಗೆ ಮುಕ್ತ ಮತ ಚಲಾವಣೆಯ ಹಕ್ಕಿಗಾಗಿ ಮಹಿಳಾ ಸಂಘಟನೆಗಳ ಚಳುವಳಿ ನಡೆದೇ ಇತ್ತು. ಈ ಚಳುವಳಿಗೆ ಪೂರ್ತಿ ಜೀವ ಬಂದು ಅದು ರಾಜ್ಯಗಳ, ದೇಶಗಳ ಗಡಿಯ ಇತಿಮಿತಿಗಳನ್ನೂ ಮೀರಿ ಹಲವು ರಾಷ್ಟ್ರಗಳ ಮಹಿಳಾ ಸಂಘಟನೆಗಳು ಒಗ್ಗಟ್ಟಾಗಿ ಬೃಹತ್ ಪ್ರತಿಭಟನೆಯಾಗಿ ರೂಪ ತಾಳಿದ್ದು 1840 ರಲ್ಲಿ. ಆ ವರ್ಷ ಲಂಡನ್ ನಲ್ಲಿ ನಡೆದ “ದಲಿತ ಶೋಷಣೆ ಹಾಗೂ ಗುಲಾಮಗಿರಿ” ಪದ್ದತಿಯ ವಿರುದ್ದದ ಚಳುವಳಿಯಲ್ಲಿ ಭಾಗವಹಿಸಲು ಅಮೆರಿಕಾದಿಂದ ಬಂದ ಮಹಿಳಾ ಪ್ರತಿನಿಧಿ ಎಲಿಜಬೆತ್ ಕ್ಯಾಡಿ ಸ್ಟ್ಯಾಂ ಟನ್ ಹಾಗೂ ಇತರ ಮಹಿಳಾ ಪ್ರತಿನಿಧಿಗಳಿಗೆ ಸಭೆಯಲ್ಲಿ  ಕುಳಿತುಕೊಳ್ಳಲು ಸೀಟು ನಿರಾಕರಿಸಲಾಯಿತು. ಅದಕ್ಕೆ ಕಾರಣ ಅವರು ಮಹಿಳೆಯರು ಎಂಬ ಲಿಂಗಬೇಧ ನೀತಿ. ಅದರಿಂದಾಗಿ ಸಿಟ್ಟಿಗೆದ್ದ ಎಲಿಜಬೆತ್ ಇನ್ನಿಬ್ಬರು ಮಹಿಳಾ ಚಳುವಳಿಗಾರ್ತಿಯರಾದ ಲುಕ್ರೆಷಿಯಾ ಮೊಟ್ಟ್ ಹಾಗೂ ಸುಸ್ಯಾನ್ ಬಿ ಅಂಥೋನಿ ಅವರನ್ನು ಭೇಟಿಯಾಗಿ ಚರ್ಚಿಸಿ “ ಮಹಿಳೆಯರಿಗೆ ಸಮಾನತೆ ಹಾಗೂ ಮತ ಚಲಾವಣೆಯ ಹಕ್ಕು” ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ಯೋಜನೆ ಕೈಗೊಂಡರು. 



ಹಲವು ದಶಕಗಳ ಕಾಲ ನಡೆದ ಈ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತು. ಪ್ರಪ್ರಥಮವಾಗಿ ಮಹಿಳೆಯರಿಗೆ ಯಾವುದೇ ನಿಬಂಧನೆಯಿಲ್ಲದೆ ಎಲ್ಲ ಮಹಿಳೆಯರಿಗೂ ಮತ ಚಲಾವಣೆಯ ಹಕ್ಕು ನೀಡಿ ಮಸೂದೆ ಜಾರಿಗೊಳಿಸಿದ ದೇಶ ನ್ಯೂಜಿಲ್ಯಾಂಡ್. 1893 ರಲ್ಲಿ ಈ ಮಸೂದೆ ಜಾರಿಗೊಳಿಸಿದ ನ್ಯೂಜಿಲ್ಯಾಂಡ್ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲು ವಿಫಲವಾಯಿತು. ನಂತರ ಎರಡನೆಯದಾಗಿ 1894 ರಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ಸೌತ್ ಆಸ್ಟ್ರೇಲಿಯಾ ಮಹಿಳೆಯರಿಗೆ  ಮತ ಚಲಾವಣೆಯ ಹಕ್ಕು ಒದಗಿಸಿ ಕೊಟ್ಟಿತು. ಇಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೂ ಕೂಡ ಕಲ್ಪಿಸಿಕೊಡಲಾಯ್ತು. ಯುರೋಪ್ ನಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಒದಗಿಸಿಕೊಟ್ಟ ಮೊದಲ ದೇಶ ಫಿನ್ ಲ್ಯಾಂಡ್. 1906ರಲ್ಲಿ ಫಿನ್ ಲ್ಯಾಂಡ್ ನಲ್ಲಿ ಮತ ಚಲಾಯಿಸುವ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿಕೊಡಲಾಯ್ತು. ಹಾಗೆಯೇ 1907 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದ ಫಿನ್ ಲ್ಯಾಂಡ್ ನ 19  ಮಹಿಳೆಯರು ಜಗತ್ತಿನ ಪ್ರಥಮ ಮಹಿಳಾ ಜನ ಪ್ರತಿನಿಧಿಗಳೆನಿಸಿದರು. ಅದಾದ ನಂತರ ನಾರ್ವೆ, ಡೆನ್ಮಾರ್ಕ್ ದೇಶಗಳೂ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಒದಗಿಸಿಕೊಟ್ಟರು. ಮಹಿಳೆಯರ ಚಳುವಳಿಗೆ ದೊಡ್ಡದಾದ ಹಾಗೂ ಎಲ್ಲ ನಿಬಂಧನೆಗಳಿಂದ ಮುಕ್ತವಾದ ಗೆಲುವು ಸಿಕ್ಕಿದ್ದು ಅಮೇರಿಕಾದಲ್ಲಿ ಮಹಿಳೆಯೂ ಕೂಡ ಸಮಾನ ಪ್ರಜೆ ಎಂಬ ನೀತಿ ಜಾರಿಗೊಳಿಸಿದಾಗ ಮಹಿಳಾ ಚಳುವಳಿಗಳಿಗೆ ಮಹತ್ತರ ತಿರುವು ಸಿಕ್ಕಿದಂತಾಯ್ತು. 1920 ರ ಆಗಸ್ಟ್ 26 ರಂದು ಅಮೇರಿಕಾದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕಿನ ಮಸೂದೆ ಮಂಡಿಸಲಾಯಿತು. ಅದರ ಜೊತೆಗೆ ದೇಶದ ಒಬ್ಬ ಪ್ರಜೆಗೆ ಇರುವ ಹಕ್ಕು ಮತ್ತು ಭಾದ್ಯತೆಗಳು ಮಹಿಳೆಗೂ ಅನ್ವಯಿಸುತ್ತವೆ ಅಂದರೆ ಮಹಿಳೆಯೂ ಸಮಾಜದ ಸಮಾನ ಪ್ರಜೆ ಎಂಬ ಮಸೂದೆಯನ್ನೂ ಕೂಡ ಮಂಡಿಸಲಾಯ್ತು. ಸುಮಾರು 100 ವರ್ಷಗಳ ಹೋರಾಟದ ಫಲವಾಗಿ ಮಹಿಳೆಯರು ಗಳಿಸಿಕೊಂಡ ಈ ಯಶಸ್ಸು ಮಹಿಳೆಯರ ಬದುಕಿನ ದಿಕ್ಕನ್ನೇ ಬದಲಿಸುವ ವರದಾನವಾಯ್ತು. ಅಮೇರಿಕಾದಲ್ಲಿ ಈ ಮಸೂದೆ ಜಾರಿಯಾಗುತ್ತಲೇ ಜಗತ್ತಿನ ಹಲವಾರು ದೇಶಗಳಲ್ಲಿ ಮಹಿಳೆಯರು ಒಗ್ಗಟ್ಟಾಗಿ ಈ ಪ್ರತಿಭಟನೆಯನ್ನು ಮುಂದುವರೆಸಿದರು ಹಾಗೂ ಈ ಮಸೂದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.  1948 ರಲ್ಲಿ ಉನೈಟೆಡ್ ನೇಷನ್ಸ್ (ಒಕ್ಕೂಟ ರಾಷ್ಟ್ರಗಳು)ನ ಹ್ಯೂಮನ್ ರೈಟ್ಸ್ ಕಮಿಷನ್ ನಿಂದ ಎಲೆನೋರ್ ರೂಸ್ ವೆಲ್ಟ್ ಅಧ್ಯಕ್ಷತೆಯಲ್ಲಿ ಯುನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್ ಅನ್ನುವ ಅಂತರ್ರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲಾಯಿತು. ಅದರ ಪ್ರಕಾರ “ಮಹಿಳೆಯರನ್ನೂ  ಸೇರಿ ಪ್ರತಿಯೊಬ್ಬರಿಗೂ ಆಯಾ ದೇಶದ ಸರ್ಕಾರದಲ್ಲಿ ಭಾಗಿಯಾಗುವ ಅಥವಾ ಪ್ರತಿನಿಧಿಯನ್ನು ಆರಿಸುವ ಹಕ್ಕು ಇದೆ ಎಂಬ ಅಂತಾರಾಷ್ಟ್ರೀಯ  ಕಾನೂನು ಪದ್ದತಿಯನ್ನು ಜಾರಿಗೆ ತರಲಾಯ್ತು.
ಅಲ್ಲಿಂದ ಮುಂದೆ ಸಮಾಜದಲ್ಲಿ ಮಹಿಳೆಯ ಸ್ಥಿತಿಗತಿ ನಿಧಾನವಾಗಿಯಾದರೂ ಗಣನೀಯವಾಗಿ ಬದಲಾಗುತ್ತಾ ಬಂತು. ಈವರೆಗೆ ಮಹಿಳೆ ಸಾಧಿಸಿದ್ದು, ಸಾಧಿಸುತ್ತಿರುವುದನ್ನೆಲ್ಲಾ ನಾವು ನೋಡುತ್ತಲೇ ಇದ್ದೇವೆ. ವಿದ್ಯೆಯಲ್ಲಿ, ಉದ್ಯೋಗದಲ್ಲಿ, ಮನೆ ಸಂಸಾರ ಸಂಭಾಳಿಸುವುದರಲ್ಲಿ, ಮಕ್ಕಳನ್ನು ಬೆಳೆಸುವಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾಳೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಎಲ್ಲ ಕೆಲಸಗಳನ್ನೂ ಒಟ್ಟಿಗೇ ಸಮರ್ಥವಾಗಿ ನಿರ್ವಹಿಸಬಲ್ಲಳು ಎಂಬುದನ್ನೂ ಸಾಬೀತುಪಡಿಸಿದ್ದಾಳೆ. ಬೌದ್ಧಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ತಾನು ಗಂಡಿಗಿಂತ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಹಾಗಿದ್ದಾಗ್ಯೂ ಮಹಿಳೆಯರಿಗೆ ದೈಹಿಕ ಶೋಷಣೆಯ ವಿರುದ್ಧ ರಕ್ಷಣೆ ನೀಡಬೇಕಾದ ಅಗತ್ಯ ಇಂದಿಗೂ ಇದೆ. ಜಗತ್ತಿನ ಎಲ್ಲೆಡೆಗಳಲ್ಲಿ ಹೆಣ್ಣಿನ ಮೇಲೆ ದೈಹಿಕ ಹಾಗೂ ಲೈಂಗಿಕ ಶೋಷಣೆ ನಡೆಯುತ್ತಲೇ ಇದೆ. ಶೋಷಣೆಗೆ ಒಳಗಾದ ಹಾಗೂ ಒಳಗಾಗುತ್ತಿರುವ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಲು ಜಗತ್ತಿನಾಧ್ಯಂತ ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರತವಾಗಿವೆ. ಅಲ್ಲದೇ, ಮಹಿಳೆಯರ ಮೂಲಭೂತ ಹಕ್ಕು ಸಂರಕ್ಷಣೆಗಾಗಿ ಹಾಗೂ ಸಾಮಾಜಿಕ ಸಮಾನತೆಯನ್ನು ಜಾರಿಗೆ ತರಲು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಯೋಜನೆಗಳು ನೆರವಾದವು. 


ಯುನೈಟೆಡ್ ನೇಷನ್ಸ್ ಸಂಸ್ಥೆಯ ಹಲವು ಪ್ರಮುಖ ಅಂತರ್ರಾಷ್ಟ್ರೀಯ ಸ್ತ್ರೀರಕ್ಷಣಾ ಕ್ರಮಗಳು
ಯುನೈಟೆಡ್ ನೇಷನ್ಸ್ ಸಂಸ್ಥೆ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ 1981 ರ ಸೆಪ್ಟೆಂಬರ್ 3 ರಂದು ಒಂದು ಅಂತರ್ರಾಷ್ಟ್ರೀಯ ಒಡಂಬಡಿಕೆ ಮಾಡಿಕೊಂಡಿತು. ಕನ್ವೇನ್ನ್ಷನ್ ಆನ್ ದ ಎಲಿಮಿನೇಶನ್ ಆಫ್ ಆಲ್ ಫಾರ್ಮ್ಸ್ ಆಫ್ ಡಿಸ್ಕ್ರೀಮಿನೇಶನ್ ಆಗೈನಸ್ಟ್ ವಿಮೆನ್  (CEDAW-Convention on the Elimination of all forms of Discrimination Against Women) ಎಂಬ ಸಾಮೂಹಿಕ ಒಡಂಬಡಿಕೆಗೆ ಕೆಲವೇ ಕೆಲವು ದೇಶಗಳನ್ನು ಹೊರತು ಪಡಿಸಿ ಸುಮಾರು 50 ದೇಶಗಳು ಬಧ್ದ್ಧತೆ ವ್ಯಕ್ತಪಡಿಸಿದವು. ಇರಾನ್, ಸುಡಾನ್, ಸೋಮಾಲಿಯ, ಕತಾರ್, ನೌರು, ಪಾಲೌ, ತೊಂಗ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಈ ಒಪ್ಪಂದಕ್ಕೆ ಸಹಿ ಮಾಡಲು ಹಲವು ಆಕ್ಷೇಪಣೆಗಳನ್ನಿಟ್ಟರು. ಈ ಒಡಂಬಡಿಕೆಯ ಮೂಲ ಉದ್ದೇಶ ಲಿಂಗ ಬೇಧ ನೀತಿಯನ್ನು ತಡೆಗಟ್ಟಿ ಸಮಾಜದಲ್ಲಿ ಪುರುಷರಿಗಿರುವ ಎಲ್ಲ ಹಕ್ಕು ಬಾಧ್ಯತೆಗಳನ್ನು ಮಹಿಳೆಯರಿಗೂ ಅನ್ವಯಿಸುವಂತೆ ನೋಡಿಕೊಳ್ಳುವುದು. ಅಂದರೆ ಮಹಿಳೆಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾಪಾಡಿ ಮಹಿಳೆಗೆ ಸಮಾಜದಲ್ಲಿ ಸಂವಿಧಾನಬದ್ಧವಾಗಿ ಸಮಾನತೆಯನ್ನು ಜಾರಿಗೆ ತರುವುದು.
ಈ ಒಡಂಬಡಿಕೆಯ ಕೆಲವು ಕಾರ್ಯ ಕಲಾಪಗಳು ಈ ಕೆಳಗಿನಂತಿವೆ :
  • ·         ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಹಂತಗಳಲ್ಲೂ ಡಿಸಿಷನ್ ಮೇಕಿಂಗ್ ನಲ್ಲಿ ಮಹಿಳೆಯರೂ ಕೂಡ ಭಾಗವಹಿಸುವುದನ್ನು ಉತ್ತೇಜಿಸುವುದು.
  • ·         ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು
  • ·         ಕಾನೂನು ರೀತ್ಯಾ ಎಲ್ಲಾ ರಂಗಗಳಲ್ಲೂ ಹಾಗೂ ಸಮಾಜದಲ್ಲೂ ಮಹಿಳೆಯರು ಹಾಗೂ ಪುರುಷರ ಸಮಾನತೆಯನ್ನು ಕಾಯ್ದುಕೊಳ್ಳುವುದು. ಹಾಗೂ ಕಾನೂನಿನ ಮೂಲಕ ಮಹಿಳೆಯರು ಹಾಗೂ ಯುವತಿಯರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು.
  • ·         ರಕ್ಷಣಾ ದಳಗಳು ಹಾಗೂ ರಕ್ಷಣಾ ಸಂಸ್ಥೆಗಳ ಮೂಲದ ಲಿಂಗ ಬೇಧ ನೀತಿಯಿಂದ ಮಹಿಳೆಯರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು.
  • ·         ಮಹಿಳೆಯರಿಗೆ ಹೊರೆಯಾಗುವಂತ ಹಾಗೂ ಲಿಂಗ ಬೇಧ ನೀತಿಗೆ ಉತ್ತೇಜನ ಕೊಡುವಂತ ಸಮಾಜದ ರೀತಿ ನೀತಿಗಳು ಹಾಗೂ ಕಟ್ಟಳೆಗಳನ್ನು ಗುರುತಿಸಿ ಅವನ್ನು ಶಮನಗೊಳಿಸಲು ಕ್ರಮ ಕೈಗೊಳ್ಳುವುದು.
  • ·         ಸಾಮಾಜಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳ ನಿರ್ಧಾರಗಳಲ್ಲಿ  ಹಾಗೂ ಅವುಗಳ ಅಳವಡಿಕೆಯಲ್ಲಿ ಮಹಿಳೆಯ ಅನುಭವಗಳು, ಅಗತ್ಯಗಳು ಹಾಗೂ ದೃಷ್ಟಿಕೋನಗಳನ್ನೂ ಗಣನೆಗೆ ತೆಗೆದುಕೊಂಡು ಮಹಿಳೆಗೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ನೆಮ್ಮದಿಯನ್ನು ನೀಡುವಂತೆ ಪ್ರೇರೇಪಿಸುವುದು ಹಾಗೂ ಖಚಿತ ಪಡಿಸಿಕೊಳ್ಳುವುದು.

ಮಹಿಳೆಯರ ಮೇಲೆ ಶೋಷಣೆ ಹಾಗೂ ಮಹಿಳೆಯರ ಮೂಲಭೂತ ಹಕ್ಕಿಗೆ ಚ್ಯುತಿ ಬರುವಂತಹ ಚಟುವಟಿಕೆ ಎಲ್ಲೇ ನಡೆಯುತ್ತಿದ್ದರೂ ರಾಷ್ಟ್ರಮಟ್ಟದಲ್ಲಾಗಲಿ ಅಥವಾ ಪ್ರಾದೇಶಿಕ ಮಟ್ಟದಲ್ಲಾಗಲಿ ಯುನೈಟೆಡ್ ನೇಷನ್ಸ್ ಸಂಸ್ಥೆಯ ಈ CEDAW ಕಾರ್ಯಕ್ರಮಮದಡಿಯಲ್ಲಿ ಸಹಾಯ ಪಡೆದುಕೊಳ್ಳಬಹುದು.

ದೈಹಿಕ ಹಾಗೂ ಲೈಂಗಿಕ ಶೋಷಣೆಯಿಂದ ಮಹಿಳೆಯರ ರಕ್ಷಣೆ –ಯುನೈಟೆಡ್ ನೇಷನ್ಸ್ ಸಂಸ್ಥೆಯ ಒಂದು ಯೋಜನೆ
ಪ್ರೊಟೆಕ್ಷನ್ ಫ್ರಮ್ ಸೇಕ್ಷುಯಲ್ ಎಕ್ಸ್ ಪ್ಲೋಯಿಟೇಶನ್ ಅಂಡ್ ಅಬ್ಯೂಸ್ ( PSEA- Protection From Sexual Exploitation and Abuse ) ಎಂಬ ಯೋಜನೆಯಡಿ ಯುನೈಟೆಡ್ ನೇಷನ್ಸ್ ಸಂಸ್ಥೆ ದೈಹಿಕ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಹಸ್ತ ನೀಡುವುದಲ್ಲದೆ ಇಂಥ ಅಪರಾಧಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ. ಈ ಕಾರ್ಯಕ್ರಮದಡಿ ನಡೆಯುವ ಪ್ರಮುಖ ಚಟುವಟಿಕೆಗಳೆಂದರೆ :
·         ಯುನೈಟೆಡ್ ಸದಸ್ಯ ರಾಷ್ಟ್ರಗಳು ಅಥವಾ ಸದಸ್ಯರಲ್ಲದ ರಾಷ್ಟ್ರಗಳಲ್ಲಿ ಕೂಡ ಮಹಿಳೆಯರ ಮೇಲೆ ದೈಹಿಕ ಅಥವಾ ಲೈಂಗಿಕ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು
·         ಈ ವಿಷಯವಾಗಿ ಜನರಲ್ಲಿ ತಿಳುವಳಿಕೆ ಹಾಗೂ ಅರಿವು ಮೂಡಿಸುವ ವಿಡಿಯೋಗಳನ್ನು ಶಿಬಿರಗಳ ಮೂಲಕ ಸಾಮಾನ್ಯ ಜನತೆಗೆ ತಲುಪುವಂತೆ ಮಾಡಿ ಜನರಲ್ಲಿ ಪ್ರಜ್ನೆ ಮೂಡಿಸುವುದು.
·         ಈ ರೀತಿಯ ದೈಹಿಕ ಹಾಗೂ ಲೈಂಗಿಕ ಶೋಷಣೆಗೊಳಗಾದ ಮಹಿಳೆಯರಿಗೆ ಸಹಾಯ ಹಸ್ತ ನೀಡುವುದು ಮತ್ತು ಅವರಿಗೆ ಹೆಚ್ಚಿನ ರಕ್ಷಣೆ ಒದಗಿಸುವುದು. ಈ ಉದ್ದೇಶಕ್ಕಾಗಿಯೇ ಈ ಕಾರ್ಯಕ್ರಮದಡಿ ನಿಗದಿತ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಈ ಕೆಲಸ ನಿರ್ವಹಿಸುವ ಸಂಸ್ಥೆಯ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ನೆರವು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಯುನೈಟೆಡ್ ನೇಷನ್ಸ್ ಸಂಸ್ಥೆಯೇ ಅಲ್ಲದೆ ಇನ್ನೂ ಹಲವು ಸಾವಿರ ಸಂಸ್ಥೆಗಳು ಜಗತ್ತಿನಾದ್ಯಂತ ಮಹಿಳೆಯರ ಹಕ್ಕು ರಕ್ಷಣೆಗಾಗಿ ಹಾಗೂ ಮಹಿಳೆಯ ಶೋಷಣೆಯ ವಿರುದ್ದ ರಕ್ಷಣೆಯ ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಸಮಾನ ಎಂಬ ಪ್ರಜ್ನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಶೋಷಿತ ಮಹಿಳೆಯರಿಗೆ ಸಹಾಯ ಹಸ್ತ ನೀಡಿ ರಕ್ಷಣೆ ನೀಡಲು ಶ್ರಮಿಸುತ್ತಿವೆ. 

ದಿಕ್ಸೂಚಿ, ಫೆಬ್ರುವರಿ 2013

No comments:

Post a Comment